

ತರೀಕೆರೆ: ತಾಲೂಕಿನ ಬೇಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎನ್.ಚಿದಾನಂದ್ ಅವಿರೋಧ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಬಿ.ಸುರೇಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಎನ್.ಚಿದಾನಂದ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಸಿ.ಜಿ.ಶಿವಕುಮಾರ್ ಚಿದಾನಂದ್ ಅವರ ಅವಿರೋಧ ಆಯ್ಕೆ ಘೋಷಿಸಿದರು.
ಮಾಜಿ ಶಾಸಕ ಹಾಗೂ ಜಿಲ್ಲಾ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ಪಿಎಸಿಎಸ್ ನೂತನ ಅಧ್ಯಕ್ಷ ಬಿ.ಎನ್.ಚಿದಾನಂದ್‌ಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಸಂಘದ ಅಭಿವೃದ್ಧಿ ದೃಷ್ಟಿಯಿಂದ ಅಧ್ಯಕ್ಷ ಸ್ಥಾನ ಹೊಂದಾಣಿಕೆ ಮೂಲಕ ಹಂಚಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. 11 ವರ್ಷಗಳ ಹಿಂದೆ ಸ್ಥಾಪನೆಯಾದ ಪಿಎಸಿಎಸ್ ಸ್ವಂತ ಕಟ್ಟಡ ನಿರ್ಮಾಣ ಮಾಡಿರುವ ಜತೆಗೆ ಗೊಬ್ಬರ, ಕೃಷಿ ಸಲಕರಣೆ ಮಾರಾಟ ಮಾಡುವ ಮೂಲಕ ಆದಾಯದ ಮೂಲ ಕಂಡುಕೊಂಡಿದೆ ಎಂದರು.
ಸಿಡಿಸಿಸಿ ಬ್ಯಾಂಕ್‌ನಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಬೇಲೇನಹಳ್ಳಿ ಪಿಎಸಿಎಸ್‌ಗೆ 1.5 ಕೋಟಿ ರೂ.ಕೆಸಿಸಿ ಸಾಲ ನೀಡಿದೆ. ಫೆಬ್ರವರಿಯಲ್ಲಿ ತರೀಕೆರೆ ತಾಲೂಕಿನ ಎಲ್ಲ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲು ತಲಾ 2 ಲಕ್ಷ ರೂ. ಸಾಲ ನೀಡಲು ಚಿಂತಿಸಲಾಗಿದೆ. ಬೇಲೇನಹಳ್ಳಿ ಪಿಎಸಿಎಸ್ ಸದ್ಯ ಎಲ್ಲ ಕಾರ್ಯಚಟುವಟಿಕೆ ಗೋದಾಮಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿ ಲಾಭಾಂಶದ ಹಣ ಕ್ರೂಢೀಕರಿಸಿ ಸುಸಜ್ಜಿತ ಆಡಳಿತ ಕಚೇರಿ ನಿರ್ಮಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.