

ಯಲಬುರ್ಗಾ: ತಾಲೂಕಿನ ವಣಗೇರಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಶ್ರೀ ಶಿವ ಚಿದಂಬರೇಶ್ವರರ 266ನೇ ಜಯಂತ್ಯುತ್ಸವ ಅಂಗವಾಗಿ ಗುರುವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.
ಮುಖಂಡ ಪಂ.ಶೇಷಾಚಲ ಭಟ್ ಜೋಶಿ ಮಾತನಾಡಿ, ಚಿದಂಬರೇಶ್ವರರು ಬೇಡಿ ಬಂದ ಭಕ್ತರಿಗೆ ವರವ ಕೊಡುವ ಗುರುವಾಗಿದ್ದಾರೆ. ಭಕ್ತರಿಗಾಗಿ ಅವತರಿಸಿದ ಭಗವಂತನಾಗಿದ್ದು, ಇಷ್ಟಾರ್ಥ ಈಡೇರಿಸುವ ಕಲ್ಪತರುವಾಗಿದ್ದಾರೆ. ಚಿದಂಬರೇಶ್ವರರು ಶಿವನ ಅವತಾರವಾಗಿದ್ದು, ಅವರ ನಾಮಸ್ಮರಣೆಯಿಂದ ಮನುಷ್ಯನ ಕಷ್ಟ ಕಾರ್ಪಣ್ಯಗಳು, ಕಲಿಯುಗದ ಪಾಪಗಳು ದೂರವಾಗಲಿವೆ ಎಂದರು.
ಜಯಂತಿ ನಿಮಿತ್ತ ಬುಧವಾರ ಧ್ವಜಾರೋಹಣವನ್ನು ವಿಶ್ವನಾಥ ದೀಕ್ಷಿತ ದಂಪತಿಗಳು ನೆರವೆರಿಸಿದರು. ಬಳಿಕ ಶಿವ ಚಿದಂಬರೇಶ್ವರ ಉತ್ಸವ ಮೂರ್ತಿ ಮೆರವಣಿಗೆ ನಂತರ ಲಕ್ಷ್ಮೀ ನಾರಾಯಣ ಹೃದಯ ಹವನ ಸುಮಂಗಲೆಯರಿಂದ ಕುಂಕುಮಾರ್ಚನೆ, ಪೂರ್ಣಾಹುತಿ ಜರುಗಿತು.
ಸಂಜೆ ಹಿರೇವಡ್ರಕಲ್‌ನ ಪ್ರಭಾಕರ ಪಟವಾರಿ, ಚೈತ್ರಾ ನಾಯಕ, ಮಾತಾರ್ಂಡ ದೇಶಪಾಂಡೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಗುರುವಾರ ಹೊಸಪೇಟೆಯ ಪಾರ್ಥ ಸಾರತಿ ಜೋಶಿ ನೇತೃತ್ವದಲ್ಲಿ ಸುಪ್ರಭಾತ, ಕಾಕಡಾರತಿ, ಪಂಚಾಮೃತ ಹಾಗೂ ರುದ್ರಾಭಿಷೇಕ, ಪಾದಪೂಜೆ ಕಾರ್ಯಕ್ರಮ, ಮಹಿಳೆಯರಿಂದ ಭಜನೆ, ತೊಟ್ಟಿಲು ಸೇವೆ, ತೀರ್ಥ ಪ್ರಸಾದ ನಡೆಯಿತು.
ಶಿವ ಚಿದಂಬರೇಶ್ವರರ ಸೇವಾ ಸಮಿತಿಯ ಗಣ್ಯರಾದ ಪ್ರಹ್ಲಾದರಾವ್ ದೇಶಪಾಂಡೆ, ಹನುಮೇಶ ದೇಶಪಾಂಡೆ, ಅಶೋಕ ದೇಶಪಾಂಡೆ, ಗುರುರಾಜ ದೇಶಪಾಂಡೆ ಇತರರಿದ್ದರು.