

ಮಂಗಳೂರು/ಉಡುಪಿ: ಕರೊನಾ ಭೀತಿಯಿದ್ದ ನೆಲಕ್ಕಚ್ಚಿದ್ದ ಕುಕ್ಕುಟೋದ್ಯಮ ಮತ್ತೆ ಚಿಗಿತುಕೊಂಡಿದ್ದು, ಕೋಳಿ ಮಾಂಸದ ದರ 200ರ ಗಡಿ ದಾಟಿ ಮುನ್ನುಗ್ಗುತ್ತಿದೆ.
ಕಳೆದೊಂದು ವಾರದಿಂದ ಕೋಳಿ ಮಾಂಸ ದರದಲ್ಲಿ ಏರಿಕೆಯಾಗುತ್ತಿದೆ. ಮಂಗಳೂರಿನಲ್ಲಿ ಶನಿವಾರ ಕೆ.ಜಿ.ಗೆ 130 ರೂ. ಇದ್ದ ದರ ಭಾನುವಾರ ಏಕಾಏಕಿ 190ಕ್ಕೆ ತಲುಪಿದೆ. ಸೋಮವಾರ ಕೋಳಿ ದರ ವಿದ್ ಸ್ಕಿನ್ ಕೆ.ಜಿ.ಗೆ 190 ರೂ., ವಿದೌಟ್ ಸ್ಕಿನ್ 220 ರೂ. ದರದಲ್ಲಿ ಮಾರಾಟವಾಗಿದೆ. ಕೋಳಿ ಮಾಂಸಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಟೈಸನ್ ಕೋಳಿ ಪೂರೈಕೆ ಬಹುತೇಕ ಕಡಿಮೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೋಳಿ ಮಾಂಸ ದರ 200ರಿಂದ 220 ರೂ.ವರೆಗೆ ಇದೆ. ಉಡುಪಿ, ಕಾರ್ಕಳದಲ್ಲಿ ಸ್ಕಿನ್ ಔಟ್ ಮಾಂಸಕ್ಕೆ 200ರಿಂದ 220, ಇಡೀ ಕೋಳಿಗೆ 140ರಿಂದ 160 ರೂ. ದರವಿದೆ. ಕುಂದಾಪುರ ಭಾಗದಲ್ಲಿ ಚಿಕನ್ ದರ ಕಡಿಮೆ ಇದ್ದು, 140ರಿಂದ 150 ರೂ. ದರವಿದೆ.
ಕೋಳಿಗೆ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಮಾತ್ರ ಹೆಚ್ಚಿನ ಬೇಡಿಕೆ ಇರುತಿತ್ತು, ಆದರೆ ಈಗ ಪ್ರತಿ ದಿನವೂ ಬೇಡಿಕೆ ಬರುತ್ತಿದೆ. ಸಣ್ಣ ಅಂಗಡಿಗಳಲ್ಲಿ ಮಧ್ಯಾಹ್ನದೊಳಗೆ ಸ್ಟಾಕ್ ಖಾಲಿಯಾಗುತ್ತಿದೆ. ಬೇಡಿಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಏಪ್ರಿಲ್-ಮೇ ತಿಂಗಳಲ್ಲಿ ಭೂತ ಕೋಲಗಳು ನಡಯುವುದರಿಂದ ಪ್ರತಿವರ್ಷ ಈ ಅವಧಿಯಲ್ಲಿ ದರ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಪೂರೈಕೆ ಕಡಿಮೆಯಾಗಿ ದರ ಏರಿಕೆಯಾಗಿದೆ ಎನ್ನುತ್ತಾರೆ ಮಂಗಳೂರಿನ ಕೋಳಿ ಮಾರಾಟ ಮಳಿಗೆಯೊಂದರ ಮಾಲೀಕರು.
ಹಠಾತ್ ಇಳಿದಿದ್ದ ದರ:ಕರೊನಾ ಹಾವಳಿ ಆರಂಭವಾಗುತ್ತಿದ್ದಂತೆ ರಾಜ್ಯ ಮೈಸೂರು ಸೇರಿದಂತೆ ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರದಿಂದಾಗಿ ಕೋಳಿ ಮಾಂಸದ ದರ ಹಠಾತ್ ಇಳಿಕೆಯಾಗಿತ್ತು. ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆ.ಜಿ. ಕೋಳಿ ದರ 30 ರೂ. ವರೆಗೂ ತಲುಪಿತ್ತು. ದರ ಇಳಿಕೆಯಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಫಾರ್ಮ್ ಹೊಂದಿರುವವರು ಉಚಿತವಾಗಿ ಕೋಳಿಗಳನ್ನು ವಿತರಿಸಿದ ಉದಾಹರಣೆಗಳು ಇವೆ.