ಬಸ್‌ನಲ್ಲಿ ಕೋಳಿ ಮಾಂಸ ವಿಚಾರ ಪ್ರಯಾಣಿಕ-ನಿರ್ವಾಹಕ ವಾಗ್ವಾದ ಪೊಲೀಸ್ ಠಾಣೆಗೆ ಕೊಂಡೊಯ್ದ ಚಾಲಕ

crime
Published on

ಮಂಗಳೂರು: ಪ್ರಯಾಣಿಕರೊಬ್ಬರು ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದನ್ನು ಆಕ್ಷೇಪಿಸಿದ ನಿರ್ವಾಹಕ ಅವಾಚ್ಯ ಶಬ್ದದಿಂದ ಪ್ರಯಾಣಿಕರನ್ನು ಬೈದಿದ್ದು, ಚಾಲಕ ಬಸ್ ಅನ್ನೇ ಪೋಲಿಸ್ ಠಾಣೆಗೆ ಕೊಂಡೊಯ್ದ ಘಟನೆ ಭಾನುವಾರ ನಡೆದಿದೆ.


ಕೂಲಿ ಕಾರ್ಮಿಕ ಸುರೇಶ್ ಎಂಬುವವರು ತುಂಬೆಯಲ್ಲಿ ಸ್ಟೇಟ್‌ಬ್ಯಾಂಕ್-ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದು, ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಚೀಲದ ಬಗ್ಗೆ ವಿಚಾರಿಸಿದ್ದರು. ಚೀಲದಲ್ಲಿ ಕೋಳಿ ಮಾಂಸ ಎಂದು ಹೇಳಿದಾಗ ಬಸ್‌ನಲ್ಲಿ ಕೋಳಿ ಮಾಂಸ ತರಲು ಅವಕಾಶವಿಲ್ಲ ಎಂದು ಹೇಳಿದ ನಿರ್ವಾಹ ಸುರೇಶ್ ಅವರನ್ನು ಕೆಳಗೆ ಇಳಿಯಲು ಸೂಚಿಸಿದರು. ಆದರೆ ಸುರೇಶ್ ಅದಕ್ಕೆ ಒಪ್ಪಲಿಲ್ಲ. ಇದರಿಂದ ಇಬ್ಬರ ಮಧ್ಯೆ ಕೆಲ ಹೊತ್ತು ವಾಗ್ವಾದ ನಡೆದಿದ್ದು, ನಿರ್ವಾಹಕ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆದರೂ ಪ್ರಯಾಣಿಕ ಬಸ್‌ನಿಂದ ಇಳಿಯದಿದ್ದಾಗ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನೇ ಬಿಸ.ಇರೋಡ್ ನಗರ ಪೊಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಎಳೆದು ಇಳಿಸಿದ್ದಾನೆ. ಈ ವೇಳೆ ಠಾಣೆಯಲ್ಲಿದ್ದ ಎಸ್‌ಐ ರಾಮಕೃಷ್ಣ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿಮಾತು ಹೇಳಿ ಕಳುಹಿಸಿದ್ದಾರೆ.

ಕಾರು-ಆಟೋ ಬಾಡಿಗೆ ಮಾಡಬೇಕಾ?
ಒಂದು ಕೆಜಿ ಕೋಳಿ, ಮೀನು ಕೊಂಡೊಯ್ಯಲು ಕಾರು-ಆಟೋ ಬಾಡಿಗೆ ಮಾಡಬೇಕಾ? ಎಂದು ಸುರೇಶ್ ಪ್ರಶ್ನಿಸಿದ್ದಾರೆ. ಬಡವರು ಕೋಳಿ ಮಾಂಸ ಕೊಂಡು ಹೋದರೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದು. ನಿರ್ವಾಹಕ-ಚಾಲಕರ ಇಂಥ ನಡೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಬಸ್‌ನಲ್ಲಿ ಕೋಳಿ, ಮೀನು ಮಾಂಸ ತರುವಂತಿಲ್ಲ, ಜೀವ ಇರುವ ವಸ್ತುಗಳನ್ನು ತರಬಹುದು, ಮಾಂಸವಾದರೆ ಇತರರಿಗೆ ವಾಸನೆ ಬರುತ್ತದೆ, ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಎಂಬ ನಿಟ್ಟಿನಲ್ಲಿ ನಿಗಮ ಅದೇಶ ಮಾಡಿದೆ ಎಂದು ಕೆಎಸ್‌ಆರ್‌ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net