

ಬಳ್ಳಾರಿ: ಮಹಾಮಾರಿ ‘ಕರೊನಾ ವೈರಸ್’ ಕೋಳಿಗೆ ಬಂದಿದೆ ಎನ್ನುವ ವದಂತಿ ಹೋಗಲಾಡಿಸುವುದಕ್ಕಾಗಿ ನಗರದ ಕಮ್ಮ ಭವನದಲ್ಲಿ ಭಾನುವಾರ ಕೋಳಿ ಸಾಕಣೆದಾರರ ಸಂಘದಿಂದ ಚಿಕನ ಫೆೆಸ್ಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಜನ ಆಗಮಿಸಿ ಚಿಕನ್ ಬಿರಿಯಾನಿ, ಕಬಾಬ್ ಮತ್ತು ಎಗ್ ಕರಿ ಸವಿದರು. ಪಶುಸಂಗೋಪನಾ ಇಲಾಖೆ ಪ್ರಭಾರ ಉಪ ನಿರ್ದೆಶಕ ಡಾ.ಕೆ.ಆರ್.ಶ್ರೀನಿವಾಸ ಮಾತನಾಡಿ, ಕೋಳಿಗಳಿಗೆ ಕರೊನಾ ವೈರಸ್ ದಾಂಗುಡಿ ಇಟ್ಟಿಲ್ಲ. ಕೇವಲ ವದಂತಿಯಿಂದ ಮಾರುಕಟ್ಟೆಯಲ್ಲಿ ಶೇ.50 ಕೋಳಿ ಮಾಂಸ ಮತ್ತು ಮೊಟ್ಟೆ ಬೇಡಿಕೆ ಕುಸಿದಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಚಿಕನ್ ಫೆಸ್ಟ್ ಆಯೋಜನೆ ಮಾಡಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ದುರ್ಗಾ ಪ್ರಸಾದ್ ಮಾತನಾಡಿದರು. ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಚಿಕನ್ ಊಟದ ಜತೆ ಅನ್ನ ಸಾಂಬಾರ್, ಮೊಸರು ಅನ್ನದ ವ್ಯವಸ್ಥೆ ಮಾಡಲಾಗಿತ್ತು.