ರಸ್ತೆಯಲ್ಲಿ ಹರಿಯುತ್ತಿದೆ ಕೋಳಿ ರಕ್ತ, ತ್ಯಾಜ್ಯ

Untitled-2
ವಿಜಯಪುರದ 17ನೇ ವಾರ್ಡ್​ ಕುಬಾಮಸೀದಿ ಮುಂಭಾಗದ ರಸ್ತೆಯಲ್ಲಿ ಕೋಳಿಯ ರಕ್ತ ಹರಿಯುತ್ತಿರುವುದು.
Published on

ವಿಜಯಪುರ: ಪಟ್ಟಣದ 17ನೇ ವಾರ್ಡ್​ ಕುಬಾಮಸೀದಿ ಮುಂಭಾಗದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಕೊಯ್ದ ಕೋಳಿ ರಕ್ತವು ರಸ್ತೆಯಲ್ಲಿ ಹರಿಯುತ್ತಿದ್ದು, ರಸ್ತೆಯಲ್ಲಿ ಸಾಗುವವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ, ಒಳಚರಂಡಿಯ ಚೇಂಬರ್​ ಪ್ಲೇಟ್​ ಮುರಿದುಹೋಗಿದ್ದು, ಸುತ್ತಮುತ್ತಲ ಕೋಳಿ ಅಂಗಡಿಗಳು ಕತ್ತರಿಸುವ ಕೋಳಿಯ ರಕ್ತ ಹಾಗೂ ಅದರ ತ್ಯಾಜ್ಯಗಳು ರಸ್ತೆಯಲ್ಲಿ ಒಳಚರಂಡಿಯಿಂದ ಹೊರಚರಂಡಿಯಾಗಿ ಹರಿಯುತ್ತಿದ್ದು ಕಳೆದ 15 ದಿನಗಳಿಂದಲೂ ಅಲ್ಲಿನ ನಿವಾಸಿಗಳಿಗೆ ಯಮಯಾತನೆ ನೀಡುತ್ತಿದೆ. ಇದರ ಮುಂಭಾಗದಲ್ಲಿಯೇ ಕುಬಾಮಸೀದಿ ಇದ್ದು, ಪ್ರತಿದಿನ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಹೋಗಿ ಬರುತ್ತಿದ್ದು, ದುರ್ವಾಸನೆ ಅನುಭವಿಸಬೇಕಾಗಿರುತ್ತದೆ ಎಂದು ಮಹಾಬೂಬ್​ ಬಾಷಾ ತಿಳಿಸಿದರು.

ಇಲ್ಲಿನ ನಿವಾಸಿ ಮೌಲಾ ಬೇಗ್​ ಎಂಬುವವರು ಪುರಸಭೆಗೆ ಸಾಕಷ್ಟು ಬಾರಿ ದೂರು ನೀಡಿದ್ದು, ಮುಖ್ಯ ಅಧಿಕಾರಿಗಳೊಂದಿಗೆ ಮಾತನಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ತಿಳಿದುಬಂದಿದೆ.

ಇಲ್ಲಿನ ಎಡಬದಿಯಲ್ಲಿ ಗುರಪ್ಪನ ಮಠ ಪೂರ್ವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದ್ದು, ಬಲಬದಿಯಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಗಳು ಹಾಗೂ ರೂಬಿ ಆಂಗ್ಲ ಖಾಸಗಿ ಶಾಲೆಯು ಇದ್ದು, ಪ್ರತಿದಿನ ವಿದ್ಯಾರ್ಥಿಗಳು ಈ ಭಾಗದಲ್ಲಿಯೇ ಸಂಚರಿಸಬೇಕಾಗಿದೆ. ಹೀಗಾಗಿ ಒಳಚರಂಡಿ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ ನಜೀರ್​ ಖಾನ್​.

ವಿಜಯಪುರ: ಆರನೇ ವಾರ್ಡ್​ನ ಮರಿಚೆನ್ನಪ್ಪ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಅಲ್ಲದೆ ಚರಂಡಿಗಳಲ್ಲಿಯೂ ಕಸ ತೆರವು ಮಾಡಿಲ್ಲ, ಹೀಗಾಗಿ ಒಳಚರಂಡಿ ಸಹ ಪದೇಪದೆ ತುಂಬಿ ಹೋಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ, ಈ ಭಾಗದಲ್ಲಿ ಓಡಾಡುವ ಜನ ಮೂಗುಮುಚ್ಚಿ ಓಡಾಡಬೇಕಾದ ಸ್ಥತಿ ಇದೆ ಎಂದು ಸ್ಥಳಿಯ ನಿವಾಸಿ ಶಿವರುದ್ರಪ್ಪ ತಿಳಿಸಿದ್ದಾರೆ.

ಹಗಲು ಹೊತ್ತಿನಲ್ಲಿ ಹೇಗಾದರೂ ಓಡಾಡಬಹುದು, ಒಳಚರಂಡಿಯ ಪ್ಲೇಟ್​ ಸಹ ಮುರಿದು ಒಳಕ್ಕೆ ಹೋಗಿದ್ದು, ರಾತ್ರಿ ಸಮಯದಲ್ಲಿ ಪದೇಪದೇ ವಿದ್ಯುತ್​ ಸಹ ಇಲ್ಲದ ಕಾರಣ ಬಿದ್ದು ಪ್ರಾಣ ಹೋದರೆ ಯಾರು ಜವಾಬ್ದಾರಿ.? | ರಿಯಾಜ್​ ಪಾಷಾ ನಿವಾಸಿ ಮೂರು ದಿನಗಳ ಹಿಂದೆ ಪುರಸಭೆಗೆ ಈ ಬಗ್ಗೆ ದೂರು ಸಲ್ಲಿಸಲಾಗಿದ್ದು, ಪುರಸಭೆ ಸಿಬ್ಬಂದಿ ವರ್ಗದವರು ಆದ್ಯತೆಯ ಮೇರೆಗೆ ಮೊದಲು ಈ ಕೆಲಸ ಮಾಡಿ ಮುಗಿಸಬೇಕಿದೆ. | ಬೈರೇಗೌಡ 17ನೇ ವಾರ್ಡ್​ನ ಪುರಸಭಾ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net