ಸರ್ಕಾರ ಜನಪರ ಆಡಳಿತ ನಡೆಸಿದೆ: ಛತ್ತೀಸ್​ಗಢ ಮಾಜಿ ಸಿಎಂ ರಮಣ ಸಿಂಗ್ ಅಭಿಮತ, ಸತೀಶ್ ರೆಡ್ಡಿ ಪರ ಪ್ರಚಾರ

BJP Campaign in Bommannahalli
Published on

ಬೊಮ್ಮನಹಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಿದೆ ಎಂದು ಛತ್ತೀಸ್​ಗಢ ಮಾಜಿ ಮುಖ್ಯಮಂತ್ರಿ ರಮಣ ಸಿಂಗ್ ಹೇಳಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪುಟ್ಟೇನಹಳ್ಳಿ, ಎಲೆಚೇನಹಳ್ಳಿ ಭಾಗದಲ್ಲಿ ಮಂಗಳವಾರ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಭರ್ಜರಿ ಪ್ರಚಾರ ನಡೆಸಿ ಅವರು ಮಾತನಾಡಿದರು. ನರೇಂದ್ರ ಮೋದಿ ನಾಯಕತ್ವದ ಸರ್ಕಾರ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸ್ವೀಕಾರ ಮಾಡಬೇಕು. ಸದೃಢ ದೇಶ ನಿರ್ವಣಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದ್ದು, ಸುಳ್ಳು ಭರವಸೆಗಳನ್ನು ನೀಡುವವರಿಗೆ ಮತ ಹಾಕಬಾರದು. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ ಅವರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗಾಗಿ ಬಿಜೆಪಿಗೆ ಮತ ನೀಡಿ ಎಂದು ರಮಣಸಿಂಗ್ ಹೇಳಿದರು.

ಎನ್​ಎಸ್​ಜಿ ಭದ್ರತೆ: ರಮಣ ಸಿಂಗ್ ಪ್ರಚಾರ ಕಾರ್ಯಕ್ಕೆ ಎನ್​ಎಸ್​ಜಿ ಭದ್ರತೆ ಒದಗಿಸ ಲಾಗಿತ್ತು. ಬೈಕ್ ರ್ಯಾಲಿಯಲ್ಲಿ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದ್ದರಿಂದ ಎನ್​ಎಸ್​ಜಿ ತಂಡ ಜಾಗ್ರತೆ ವಹಿಸಿತ್ತು.

ಅಭಿವೃದ್ಧಿ ಕೆಲಸ ಜನರನ್ನು ತಲುಪಿದೆ

ಕ್ಷೇತ್ರದಲ್ಲಿ ಮತಯಾಚನೆಗೆ ಹೋದಾಗ ಜನ ಪ್ರೀತಿಯಿಂದ ಸ್ವೀಕಾರ ಮಾಡುತ್ತಿದ್ದು, ನಮ್ಮ ಅಭಿವೃದ್ಧಿ ಜನರಿಗೆ ತಲುಪಿದೆ ಎಂಬುದು ಗೊತ್ತಾಗುತ್ತಿದೆ. ಹಿಂದಿನಂತೆಯೇ ಜನಪರ ಕೆಲಸ ಮಾಡುತ್ತ, ಜನರ ಕೈಗೆ ಸಿಗುವ ಶಾಸಕನಾಗಿ ಇರುತ್ತೇನೆ ಎಂದು ಸತೀಶ್ ರೆಡ್ಡಿ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಜನರ ಬಳಿ ಹೋಗಿ ಮತ ಕೇಳಬೇಕು. ಅದನ್ನು ಬಿಟ್ಟು ಏಕವಚನದಲ್ಲಿ ಎಲ್ಲರ ಮೇಲೆ ಮಾತಾಡಿಕೊಂಡು ತಿರುಗಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net