

ಹುಬ್ಬಳ್ಳಿ: ಮರಾಠಾ ಶ್ರೀ ಭಾರತಿಮಠ ಟ್ರಸ್ಟ್ ಸಮಿತಿ ಆಶ್ರಯದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜನ್ಮ ದಿನೋತ್ಸವವನ್ನು ಫೆ. 19ರಂದು ಬೆಳಗ್ಗೆ 8 ಗಂಟೆಗೆ ಇಲ್ಲಿನ ಮರಾಠಾ ಗಲ್ಲಿಯಲ್ಲಿ ಆಯೋಜಿಸಲಾಗಿದೆ.
ಸಮಾಜದ ಮುಖಂಡರಾದ ರಾಮಚಂದ್ರ ಶಿಂಧೆ, ವಿಶ್ವಾಸರಾವ ಜಾಧವ ಅವರು ಮರಾಠಾ ಗಲ್ಲಿಯ ಶ್ರೀ ಶಿವಾಜಿ ಚೌಕ್ನಲ್ಲಿ ಧ್ವಜಾರೋಹಣ ಮಾಡುವರು. ವಿದ್ಯಾನಗರದ ಮರಾಠಾ ಭವನದ ಆವರಣದಲ್ಲಿರುವ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಕಂಚಿನ ಅಶ್ವಾರೂಢ ಪುತ್ಥಳಿಗೆ ಬೆಳಗ್ಗೆ 9.30ಕ್ಕೆ ಮುಖಂಡರಾದ ಕೇಶವರಾಮ ಯಾದವ, ನಾರಾಯಣ ಜಾಧವ ಹಾಗೂ ಮತ್ತಿತರರು ಮಾಲಾರ್ಪಣೆ ಮಾಡುವರು.
ಶ್ರೀ ಶಿವಾಜಿ ಮಹಾರಾಜರ ಮೂರ್ತಿ ತೊಟ್ಟಿಲು ಹಾಕುವ ಕಾರ್ಯಕ್ರಮ, ಅರಿಷಿಣ- ಕುಂಕುಮ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಜೀಜಾಮಾತಾ ಮಹಿಳಾ ಮಂಡಳ, ಮರಾಠಾ ಸಮಾಜದ ಮಹಿಳಾ ಮಂಡಳ ಸೇರಿದಂತೆ ಸಮಸ್ತ ಸಮಾಜ ಬಾಂಧವರಿಂದ ನಡೆಯಲಿದೆ.
ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆಗೆ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಸಮಾಜದ ಅಧ್ಯಕ್ಷ ಸುನೀಲ ದಳವಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಶ್ರೀನಿವಾಸ ಮಾನೆ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ವಿಧಾನ ಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಹಾಪೌರ ರಾಮಣ್ಣ ಬಡಿಗೇರ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಮೆರವಣಿಗೆಯು ಮರಾಠಾ ಗಲ್ಲಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ.