

ಗಜೇಂದ್ರಗಡ: ಪಟ್ಟಣದ ಶಿವಾಜಿಪೇಟೆಯ ಶ್ರೀ ಮಾರುತೇಶ್ವರ ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀ ಮಾರುತೇಶ್ವರ ತರುಣ ಸಂಘದ ಆಶ್ರಯದಲ್ಲಿ ಫೆ. 19ರಂದು ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನದಲ್ಲಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 8 ಗಂಟೆಗೆ ಯಶರಾಜ್ ಪ್ರತಾಪಸಿಂಹ ಘೋರ್ಪಡೆ ಅವರ ನೇತೃತ್ವದಲ್ಲಿ ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ಹಾಗೂ ಮಾರುತಿ ಹನುಮಂತಪ್ಪ ಗಡ್ಡದ ಅವರಿಂದ ಭಗವಾ ಧ್ವಜಾರೋಹಣ ನೆರವೇರಲಿದೆ.
ಬೆಳಗ್ಗೆ 9 ಗಂಟೆಗೆ ಕ್ಷತ್ರಿಯ ಮರಾಠ ಸಮಾಜದ ಧರ್ಮಗುರು ಬಲರಾಮಗಿರಿ ಶಂಕರಗಿರಿ ಗೋಸಾವಿಮಠ ಅವರ ದಿವ್ಯ ಸಾನ್ನಿಧ್ಯದಲ್ಲಿ ಜಯಂತ್ಯುತ್ಸವ ಕಾರ್ಯಕ್ರಮ ನೆರವೇರಲಿದ್ದು, ಶ್ರೀ ಮಾರುತೇಶ್ವರ ದೇವಸ್ಥಾನದ ಅರ್ಚಕ ಪರಸಪ್ಪ ಹ ಪೂಜಾರ ಸಾನ್ನಿಧ್ಯ ವಹಿಸುವರು. ಮರಾಠ ಸಮಾಜದ ಅಧ್ಯಕ್ಷ ಶೇಖಪ್ಪ ರಾಮಜಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಜಿ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಜಿ ಸಚಿವ ಕಳಕಪ್ಪ ಬಂಡಿ ಪುಷ್ಪಾರ್ಚನೆ ಮಾಡುವರು.
ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯರಾದ ಶಿವರಾಜ ಎಸ್. ಘೋರ್ಪಡೆ, ಯಮನಪ್ಪ ತಿರಕೋಜಿ ಹಾಗೂ ಸಮಾಜದ ಮಾಜಿ ಅಧ್ಯಕ್ಷರು ಆಗಮಿಸುವರು. ಶಿಕ್ಷಕ ಎಂ.ಎಂ. ಕರಿಪುಟ್ಟಣವರು ಉಪನ್ಯಾಸ ನೀಡುವರು.
ಮಧ್ಯಾಹ್ನ 12.15ಕ್ಕೆ ಆಯೋಜಿಸಿರುವ ಬೈಕ್ ರ‌್ಯಾಲಿಗೆ ಕೃಷ್ಣ ಸೂರ್ಯವಂಶಿ ಚಾಲನೆ ನೀಡುವರು. 3.15ಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ರಾಜವಾಡೆ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.