ಶಿವಾಜಿ ಮಹಾರಾಜರ ಉದ್ದೇಶ ಸಾರ್ಥಕಗೊಳಿಸಿದ ಆರ್‌ಎಸ್‌ಎಸ್

Chhatrapati Shivaji Maharaj, RSS, Arvindrao Deshpande, Muddebihala, Rashtriya Swayamsevak Sangh, Gandhiji, Emergency,
ಮುದ್ದೇಬಿಹಾಳದಲ್ಲಿ ಆರ್‌ಎಸ್‌ಎಸ್‌ನ ಬೌದ್ಧಿಕ ಕಾರ್ಯಕ್ರಮದಲ್ಲಿ ಅರವಿಂದರಾವ ದೇಶಪಾಂಡೆ ಮಾತನಾಡಿದರು. ಬಸವರಾಜ ಮೋಟಗಿ ಇದ್ದರು.
Published on

ಮುದ್ದೇಬಿಹಾಳ: ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದಿಂದಾಗಿ ನಾವೆಲ್ಲ ಈಗಲೂ ಹಿಂದುಗಳಾಗಿ ಉಳಿದಿದ್ದೇವೆ. ಹಿಂದು ಸಮಾಜದಲ್ಲಿ ಸಂಘಟಿತ ಶಕ್ತಿ ತರುವುದು ಶಿವಾಜಿ ಮಹಾರಾಜರ ಉದ್ದೇಶವಾಗಿತ್ತು. 100 ವರ್ಷಗಳ ಇತಿಹಾಸದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅವರ ಉದ್ದೇಶವನ್ನು ಸಾರ್ಥಕಗೊಳಿಸಿದೆ ಎಂದು ಆರ್‌ಎಸ್‌ಎಸ್‌ನ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ ಹೇಳಿದರು.

ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ಸಂಜೆ ಪಥಸಂಚಲನದ ನಂತರ ಏರ್ಪಡಿಸಿದ್ದ ಬೌದ್ಧಿಕದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಗಾಂಧೀಜಿ ಅವರು 12 ವರ್ಷ ದೇಶ ಸುತ್ತಿದ ನಂತರ ಪ್ರತಿಯೊಬ್ಬ ಮುಸ್ಲಿಂ ಗುಂಡಾ, ಹಿಂದು ಹೇಡಿ ಎಂದು ಹೇಳಿದ್ದರು. ವೀರ ಸಾವರ್ಕರ್ ಕೂಡ ಹಿಂದುತ್ವಕ್ಕಾಗಿ ತ್ಯಾಗ ಮಾಡಿದರು. ಸ್ವಾತಂತ್ರಾೃನಂತರ ಆಡಳಿತಕ್ಕೆ ಬಂದವರು ಸಂಘ ತುಳಿಯುವ ಕೆಲಸ ಮಾಡಿದರು. ತುರ್ತು ಪರಿಸ್ಥಿತಿಯ ನಂತರ ಪರಿಸ್ಥಿತಿ ಬದಲಾಯಿತು. 90ರ ದಶಕದ ನಂತರ ಸಂಘಕ್ಕೆ ವಿಶ್ವಮಾನ್ಯತೆ ದೊರೆಯಿತು. ಸಂಘದ ಕಾರಣದಿಂದ ಸದ್ಯ ನಾವು ಹಿಂದು ಎಂದು ಹೇಳಿಕೊಳ್ಳಲು ಮುಂದೆ ಬರುತ್ತಿದ್ದಾರೆ ಎಂದರು.

ಸಂಘದ ಸಂಸ್ಥಾಪಕ ಡಾ.ಹೆಡಗೇವಾರ ಅವರ ಮುಂದಾಲೋಚನೆಯಿಂದಾಗಿ ಆಚರಿಸಲಾಗುತ್ತಿರುವ ಸಂಘದ 6 ಉತ್ಸವಗಳಲ್ಲಿ ವಿಜಯದಶಮಿ ಉತ್ಸವವೂ ಒಂದು. ಇದಕ್ಕೆ ಹೆಚ್ಚಿನ ಮಹತ್ವ ಇದೆ. ದೇಶಾದ್ಯಂತ ಈ ದಿನದಂದು ಪಥಸಂಚಲನ ನಡೆಯುತ್ತದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಜಗತ್ತಿಗೆ ಅತ್ಯುತ್ತಮ ಕೊಡುಗೆಗಳಾಗಿವೆ. ರಾಮ ಕಾಲ್ಪನಿಕ ಪುರುಷನಲ್ಲ. ಐತಿಹಾಸಿಕ ಪುರುಷ. ಇದಕ್ಕೆ ಸಂಶೋಧನೆ ದಾಖಲೆ ಇವೆ. ಲಂಕೆಗೆ ಹೋಗಲು ಸೇತುವೆ ಕಟ್ಟಿದ ಅಸ್ತಿತ್ವವನ್ನು ನಾಸಾ ಖಚಿತಪಡಿಸಿದೆ. ರಾಮ ವಾಸ್ತವವೂ ಹೌದು ಎಂದರು.

ಪಥಸಂಚಲನವು ಸಂಘದ ಶಾಖೆಗಳಲ್ಲಿ ನಿತ್ಯ ನಡೆಯುವ ಚಟುವಟಿಕೆಗಳ ಪ್ರದರ್ಶನವಾಗಿದೆ. ಶರೀರ, ಮನಸ್ಸು, ಬುದ್ಧಿಗೆ ಸಂಸ್ಕಾರ ಕೊಡುವ ರೂಪವೇ ಶಾಖೆ. ಇದು ಸಮಾಜದಲ್ಲಿ ಆತ್ಮವಿಶ್ವಾಸ, ಕ್ಷಾತ್ರಭಾವ ತಂದುಕೊಡುತ್ತದೆ. ಸಮಾಜ ಒಂದಾಗಿ ನಿಲ್ಲಬೇಕೆನ್ನುವ ಭಾವ ಪಥಸಂಚಲನದಲ್ಲಿದೆ ಎಂದರು.

ಹಿಂದು ಸಮಾಜದ 500 ವರ್ಷಗಳ ಕಳಂಕ ರಾಮ ಮಂದಿರ ನಿರ್ಮಾಣದಿಂದ ತೊಳೆಯಿತು. 6.5 ಲಕ್ಷ ಹಳ್ಳಿಗಳ ಜನತೆಯಿಂದ ಮನೆಮನೆಗೆ ಹೋಗಿ ಪಟ್ಟಿ ಸಂಗ್ರಹಿಸಿ 3500 ಕೋಟಿ ರೂ. ಸಂಗ್ರಹಿಸಲಾಯಿತು. ಸಂಘದ ಅವಿರತ ಹೋರಾಟದಿಂದಾಗಿಯೇ ರಾಮಸೇತುವೆ ಧ್ವಂಸ ನಿಂತಿದೆ. ತೆಲಂಗಾಣದ ಸಿಎಂ ರಾಜಶೇಖರ ರಡ್ಡಿ ತಿರುಪತಿ ಬೆಟ್ಟ ಖಾಸಗೀಕರಣ ಕೈಬಿಡಲು ಸಂಘದ ಹೋರಾಟ ಕಾರಣ. ಸಂಘದ ಕಾರ್ಯವನ್ನು ಸದ್ಯ ಜಗತ್ತು ಗುರುತಿಸುತ್ತಿದೆ. ವಿಎಚ್‌ಪಿ, ಎಬಿವಿಪಿ, ಭಾರತೀಯ ಮಜ್ದೂರ ಸೇರಿ 52 ಸಂಘಟನೆಗಳು ಸಂಘದಿಂದ ಪ್ರಾರಂಭಗೊಂಡಿವೆ ಎಂದರು.

ಗಣ್ಯವರ್ತಕ ಬಸವರಾಜ ಮೋಟಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಸೇರಿ ಅನೇಕ ಗಣ್ಯರು, ಸಂಘ-ಸಂಸ್ಥೆಗಳ ಮುಖಂಡರು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಘೋಷ, ದಂಡ, ಕೇರಳದ ಕಲರಿ ಮಾದರಿಯ ನಿಯುದ್ಧ ದಂಡ, ವ್ಯಾಯಾಮ ಪ್ರದರ್ಶನಗಳು ಸ್ವಯಂ ಸೇವಕರಿಂದ ನಡೆದವು. ಗಿರೀಶ ದೇಶಪಾಂಡೆ ಪ್ರಾರ್ಥಿಸಿದರು. ನೀಲಕಂಠ ಪವಾರ ಧ್ವಜಾರೋಹಣಗೊಳಿಸಿದರು. ವಿನೋದ ಮಡಿವಾಳರ ವೈಯಕ್ತಿಕ ಗೀತೆ ಹಾಡಿದರು. ಪ್ರಭು ನಂದೆಪ್ಪನವರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net