

ಕುಷ್ಟಗಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಛತ್ರಪತಿ ಶಿವಾಜಿ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಅಪ್ರತಿಮ ವೀರ ಶಿವಾಜಿ ದೇಶ ಒಗ್ಗೂಡಿಸಲು ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದ ಧೀರ. ಅವರ ರಾಷ್ಟ್ರಪ್ರೇಮ ಹಾಗೂ ಅಭಿಮಾನ ಮಾದರಿಯಾಗಿದೆ ಎಂದು ಬಣ್ಣಿಸಿದರು. ಕಾಲೇಜಿನ ಸಿಬ್ಬಂದಿ ಚೌಡಪ್ಪ, ಸುರೇಶ ಇತರರಿದ್ದರು.
ತಹಸಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಶಿರಸ್ತೇದಾರ್ ವಿಜಯಲಕ್ಷ್ಮೀ ಉದ್ಘಾಟಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳಾದ ಮಂಜುನಾಥ, ರಾಜೇಶ್ವರಿ, ಅನಂತಕುಮಾರ್, ಶಾಹೀನಾ ಇತರರಿದ್ದರು.