

ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಜಾಗೆ ವಿಚಾರದಲ್ಲಿ ಮುಸುಕಿನ ಗುದ್ದಾಟ ಜೋರಾಗಿರುವ ಸಮಯದಲ್ಲಿ ಯಾರೂ ಅನಾಮಿಕರು ಬಾಗಲಕೋಟೆ ನಗರದ ಅದೇ ಜಾಗೆಯಲ್ಲೆ ರಾತ್ರೋ ರಾತ್ರಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ನಗರ ಹಾಗೂ ನವನಗರದ ಮಧ್ಯದಲ್ಲಿ ಲಯನ್ಸ್ ಸರ್ಕಲ್ ಬಳಿ ಇರುವ ಜಾಗೆಯೊಂದರಲ್ಲಿ ರಾತ್ರಿ ಕಳೆದ ಬೆಳಕಾಗುವಷ್ಟರಲ್ಲಿ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ, ಮಾಡಿದ್ದು ಯಾರು? ಎನ್ನುವುದು ಮಾತ್ರ ನಿಗೂಢವಾಗಿದೆ.
ನಿಗದಿತ ಜಾಗೆಯಲ್ಲಿ ಸದ್ಯ ಪ್ರತಿಷ್ಠಾಪನೆ ಮಾಡಿರುವ ಶಿವಾಜಿ ಅಶ್ವಾರೂಢ ಪುತ್ಥಳಿಯು ಅಂದಾಜು 6 ರಿಂದ 7 ಅಡಿ ಎತ್ತರ ಇದೆ. ಮೂರ್ತಿ ತಲೆ ಎತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಒಂದು ಜಾತಿಗೆ ಸೀಮಿತರಾದವರು ಅಲ್ಲ. ಅಖಂಡ ಹಿಂದೂ ಧರ್ಮಕ್ಕಾಗಿ ಶ್ರಮಿಸಿದವರು. ಅವರು ಮೂರ್ತಿ ಪ್ರತಿಷ್ಠಾಪನೆಗೆ ಈ ಜಾಗೆ ಗುರುತಿಸಿ, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೆಲವರು ಸುಖಾಸುಮ್ಮನೆ ತಕರಾರು ಮಾಡಿ, ಕಾನೂನಿನ ಮೂಲಕ ತೊಂದರೆ ಉಂಟುಮಾಡಿದ್ದರು. ಇದೀಗ ಶಿವಾಜಿ ಮಹಾರಾಜರ ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ. ಮುಂಬರುವ ದಿನಗಳಲ್ಲಿ ಇಲ್ಲಿ ಪ್ರತಿಷ್ಠಾಪನೆ ಮಾಡಲು ಸಿದ್ಧಪಡಿಸಿರುವ 16 ಅಡಿ ಎತ್ತರದ ಮೂರ್ತಿಯನ್ನು ನಗರದಲ್ಲಿ ಭವ್ಯ ಸಮಾರಂಭದ ಮೂಲಕ ನೆರವೇರಿಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಮುಖಂಡ ರಾಜು ರೇವಣಕರ, ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಗುಂಡು ಶಿಂಧೆ ತಿಳಿಸಿದರು.
ನಿಗದಿತ ಜಾಗೆಯಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. 16 ಅಡಿ ಎತ್ತರದ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಈ ಬಗ್ಗೆ ಪೊಲೀಸರಿಗೆ ಕೆಲವರು ತಕರಾರು ನೀಡಿದ್ದಾರೆಂದು ಒಂದು ಗುಂಪು ಆರೋಪಿಸಿತ್ತು. ಇದೇ ವಿಚಾರವಾಗಿ ಬಿಜೆಪಿಯಲ್ಲಿ ಭಿನ್ನಮತಕ್ಕೂ ಕಾರಣವಾಗಿತ್ತು. ವಿಧಾನಸಭೆ ಚುನಾವಣೆ ಬಳಿಕ ಬಾಗಲಕೋಟೆ ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಿದ್ದ ನರೇಂದ್ರ ಮೋದಿ ಅವರ 9 ವರ್ಷಗಳ ಸಾಧನೆ ಬಿಂಬಿಸುವ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರತಿಧ್ವನಿಸಿತ್ತು. ಕೊನೆಗೆ ಗದ್ದಲ ಗಲಾಟೆ ನಡೆದು ಇಡೀ ರಾಜ್ಯದಲ್ಲಿ ಗಲಾಟೆ ಸದ್ದು ಮಾಡಿತ್ತು. ಇದೀಗ ಅದೇ ಜಾಗೆಯಲ್ಲಿ ಯಾರೋ ಬೇರೊಂದು ಮೂರ್ತಿಯನ್ನು ತಂದು ರಾತ್ರೋ ರಾತ್ರಿ ಪ್ರತಿಷ್ಠಾಪನೆ ಮಾಡಿದ್ದಾರೆ.