ಚೆಟ್ಟಳ್ಳಿಯ ಪ್ರಾಯೋಗಿಕ ಕೇಂದ್ರ ಮೇಲ್ದರ್ಜೆಗೆ

CHETTALLY EXPERIMENTAL CENTER UPGRADED
Published on

ಸುನಿಲ್ ಪೊನ್ನೇಟಿ ಮಡಿಕೇರಿ
ಕೊಡಗಿನ ಕುಶಾಲನಗರ ತಾಲೂಕು ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅಪರೂಪದ ವಿದೇಶಿ ಹಣ್ಣುಗಳ ಸಂಶೋಧನೆಗೋಸ್ಕರ ದೇಶದಲ್ಲಿರುವ ಏಕೈಕ ಸಂಶೋಧನಾ ಕೇಂದ್ರ ಎನ್ನುವ ಹೆಗ್ಗಳಿಕೆ ಈ ಕೇಂದ್ರದ್ದಾಗಿದ್ದು, ಇದರ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ. ಸೀಮಿತ ಅವಕಾಶಗಳ ಮಧ್ಯೆ ಇಲ್ಲಿ ಈಗಾಲೇ ನಡೆದಿರುವ ಸಾಕಷ್ಟು ಸಂಶೋಧನೆಗಳ ಪ್ರಯೋಜನ ಕೃಷಿಕರಿಗೆ ನೇರವಾಗಿ ತಲುಪುವಂತಾಗಿದ್ದು, ಕೇಂದ್ರದ ಬಗ್ಗೆ ನಿರೀಕ್ಷೆ ಜಾಸ್ತಿ ಆಗಿದೆ.

ಬಟರ್‌ಫ್ರೂಟ್, ಲಿಚ್ಚಿ, ರ‌್ಯಾಂಬುಟಾನ್…ಹೀಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಲವು ಬಗೆಯ ವಿದೇಶಿ ಹಣ್ಣುಗಳನ್ನು ಸ್ಥಳೀಯವಾಗಿ ಬೆಳೆಯುವಂತೆ ಮಾಡುವಲ್ಲಿ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಪಾತ್ರ ದೊಡ್ಡದಿದೆ. ವಿಭಿನ್ನವಾದ ಹವಾಮಾನ, ಮಣ್ಣು, ಮಳೆ ಪರಿಸ್ಥಿತಿ, ಭೌಗೋಳಿಕ ವಾತಾವರಣದಲ್ಲಿ ಮಾತ್ರ ಬೆಳೆಯುವ ಇಂತಹ ಹಣ್ಣುಗಳನ್ನು ಭಾರತದಂತಹ ದೇಶಕ್ಕೂ ಒಗ್ಗಿಸಲು ಈ ಕೇಂದ್ರದ ಪ್ರಯೋಗಗಳು ಸಹಕಾರಿ ಆಗಿದೆ.

ದೊಡ್ಡ ವಿಸ್ತೀರ್ಣದ ಭೂ ಪ್ರದೇಶ ಹೊಂದಿರುವ ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಹವಾಮಾನ, ಮಣ್ಣು, ಮಳೆಯ ಪ್ರಮಾಣ, ಭೌಗೋಳಿಕ ವಾತಾವರಣ ಸಾಕಷ್ಟು ಭಿನ್ನವಾಗಿರುತ್ತದೆ. ಹಾಗಾಗಿ ಒಂದು ಪ್ರದೇಶದಲ್ಲಿ ಬೆಳೆಯುವ ಬೆಳೆ ಮತ್ತೊಂದು ಪ್ರದೇಶದಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಇಂಥ ಸವಾಲಿನ ಮಧ್ಯೆಯೂ ವಿದೇಶಿ ಹಣ್ಣುಗಳನ್ನು ಭಾರತೀಯ ವಾತಾವರಣದಲ್ಲಿ ಬೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಿರಂತರವಾಗಿ ಪ್ರಯೋಗಗಳು ನಡೆಯುತ್ತಿರುತ್ತದೆ.

ಇಲ್ಲಿ ನಡೆಯುವ ಸಂಶೋಧನೆಗಳ ಮೂಲಕ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಹೊಸ ತಳಿಗಳ ಅಭಿವೃದ್ಧಿ ಮಾಡಲಾಗುತ್ತದೆ. ಜತೆಗೆ ಸ್ಥಳೀಯವಾಗಿ ಬಾಧಿಸಬಹುದಾದ ರೋಗಗಳು, ಕೀಟಗಳ ನಿಯಂತ್ರಣ, ಪೋಷಕಾಂಶ ನಿರ್ವಹಣೆ, ಪರಾಗಸ್ಪರ್ಶಕ್ಕೆ ಪೂರಕ ವಾತಾವರಣ ಸೇರಿದಂತೆ ಎಲ್ಲಾ ಬಗೆಯ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು, ವಿದೇಶಿ ಹಣ್ಣುಗಳನ್ನು ಬೆಳೆಯುವ ಸ್ಥಳೀಯ ರೈತರಿಗೆ ಇದರಿಂದ ದೊಡ್ಡ ಮಟ್ಟದ ಉಪಯೋಗ ಆಗುತ್ತಿದೆ.
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರವಾಗಿದೆ. ಜಗತ್ಪ್ರಸಿದ್ಧ ಕೊಡಗಿನ ಕಿತ್ತಳೆ ಸಂಶೋಧನೆಗೋಸ್ಕರ ಅಂದಿನ ಕೊಡಗು ಸರ್ಕಾರದಿಂದ ೧೯೪೭ರಲ್ಲಿ ಈ ಕೇಂದ್ರ ಪ್ರಾರಂಭಿಸಲಾಯಿತು. ಅವನತಿ ಹಾದಿ ಹಿಡಿದಿದ್ದ ಕಿತ್ತಳೆ ಬಗ್ಗೆ ಅಧ್ಯಯನ ಮಾಡುವುದು ಕೇಂದ್ರದ ಪ್ರಮುಖ ಉದ್ದೇಶವಾಗಿತ್ತು.

ಉಷ್ಣವಲಯ ಮತ್ತು ಅರೆಉಷ್ಣವಲಯದ ಆಯ್ದ ಹಣ್ಣುಗಳ ಮೌಲ್ಯಮಾಪನ ಮತ್ತು ರೂಪಾಂತರ ಪ್ರಯೋಗಗಳನ್ನು ನಡೆಸಲು ೧೯೫೭ ರಲ್ಲಿ ಈ ಕೇಂದ್ರವನ್ನು ಕೂರ್ಗ್ ಹಣ್ಣಿನ ಸಂಶೋಧನಾ ಕೇಂದ್ರವಾಗಿ ಪರಿವರ್ತಿಸಲಾಯಿತು. ೧೯೬೦ರಲ್ಲಿ ಐಸಿಎಆರ್‌ನಿಂದ ಧನಸಹಾಯ ಪಡೆದ ದೇಶದಲ್ಲಿನ ಆರು ಪ್ರಾದೇಶಿಕ ಹಣ್ಣು ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿ ಈ ಕೇಂದ್ರ ಆಧುನೀಕರಣ ಪ್ರಕ್ರಿಯೆಗೆ ಒಳಪಟ್ಟಿತು. ಕೆಲವೊಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ತೋಟಗಾರಿಕಾ ಸಂಶೋಧನೆಯ ಎಲ್ಲಾ ಅಂಶಗಳ ಕೆಲಸವನ್ನು ಚುರುಕುಗೊಳಿಸಲು ೧೯೭೨ರಲ್ಲಿ ಈ ಕೇಂದ್ರವನ್ನು ಐಐಎಚ್‌ಆರ್‌ಗೆ ಹಸ್ತಾಂತರಿಸಲಾಯಿತು. ೯೨ ಹೆಕ್ಟೇರ್ ಪ್ರದೇಶದಷ್ಟು ಜಾಗ ಹೊಂದಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದದಲ್ಲಿ ಕೀಟಶಾಸ್ತ್ರ, ಸಸ್ಯ ರೋಗಶಾಸ್ತ್ರ, ತೋಟಗಾರಿಕೆ ಹಾಗೂ ಮಣ್ಣು ವಿಜ್ಞಾನದ ನಾಲ್ಕು ಸಂಶೋಧನಾ ಪ್ರಯೋಗಾಲಯಗಳು ಇವೆ
ಅಣಬೆ ಕೃಷಿ ಘಟಕ, ವರ್ಮಿಕಾಂಪೋಸ್ಟಿಂಗ್ ಘಟಕ, ಸುಸಜ್ಜಿತ ಗ್ರಂಥಾಲಯ ಹಾಗೂ ಆಡಳಿತ ವಿಭಾಗ ಪ್ರಾಯೋಗಿಕ ಕೇಂದ್ರದ ಮುಖ್ಯ ಕಟ್ಟಡದಲ್ಲಿದೆ. ಈ ಕೇಂದ್ರದಲ್ಲಿ ಸಂಶೋಧನೆಯ ಮೂಲ ಬೆಳೆ ಕೊಡಗಿನ ಕಿತ್ತಳೆ ಆಗಿದ್ದು, ಇದಕ್ಕೆ ಕಂಟಕವಾಗಿರುವ ಸಿಟ್ರಸ್ ಡೈ-ಬ್ಯಾಕ್ ರೋಗದ ಬಗ್ಗೆ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಬಟರ್‌ಫ್ರೂಟ್, ರ‌್ಯಾಂಬುಟಾನ್, ಲಿಚಿ, ಮ್ಯಾಂಗೋಸ್ಟೀನ್ ಸೇರಿದಂತೆ ಅಪರೂಪದ ವಿದೇಶಿ ಹಣ್ಣುಗಳು, ಕೆಲವೊಂದು ತೋಟಗಾರಿಕಾ ಬೆಳೆಗಳ ಮೇಲೆಯೂ ಇಲ್ಲಿ ಸಂಶೋಧನಾ ಕೆಲಸಗಳು ಆಗುತ್ತಿದೆ. ರೋಗಮುಕ್ತ ಕಿತ್ತಳೆ ಮತ್ತು ಇತರ ಗಿಡಗಳ ಉತ್ಪಾದನೆ ಹಾಗೂ ವಿತರಣೆಗಾಗಿ ಉತ್ತಮವಾಗಿ ಹೈಟೆಕ್ ನರ್ಸರಿ ಘಟಕವೂ ಇಲ್ಲಿದೆ. ಟ್ರೈಕೋಡರ್ಮಾ, ಹಾರ್ಜಿಯಾನಮ್ ಕಲ್ಚರ್ಸ್, ಮಶ್ರೂಮ್ ಸ್ಪಾನ್, ಫ್ರೂಟ್ ಫ್ಲೈ ಟ್ರ್ಯಾಪ್‌ಗಳನ್ನು ರೈತರಿಗೆ ಸರಬರಾಜು ಮಾಡಲಾಗುತ್ತದೆ. ಮಣ್ಣು ಪರೀಕ್ಷೆಯನ್ನೂ ನಡೆಸಲಾಗುತ್ತದೆ.

ಒಂದೊಮ್ಮೆ ಇಲ್ಲಿ ಪಪ್ಪಾಯಿ ಹಣ್ಣಿನ ಸಂಶೋಧನೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ಸಂಶೋಧಕ ಡಾ. ನಂಜಪ್ಪ ೧೯೫೮ರಲ್ಲಿ ಈ ಕೇಂದ್ರದಲ್ಲಿ ಕೂರ್ಗ್ ಹನಿ ಡ್ಯೂ ಪಪ್ಪಾಯಿ ಅಭಿವೃದ್ಧಿ ಪಡಿಸಿದ್ದರು. ಗುಜರಾತ್ ಮತ್ತು ರಾಜಾಸ್ತಾನದಲ್ಲಿ ಈಗ ಈ ತಳಿಯ ಪಪ್ಪಾಯಿ ಹೆಚ್ಚು ಜನಪ್ರಿಯವಾಗಿದ್ದು, ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಸಾಮಾನ್ಯವಾಗಿ ಕಾಡಿನಲ್ಲಿ ಮಾತ್ರ ಸಿಗುತ್ತಿದ್ದ ವಿಶೇಷ ತರಕಾರಿ ಮಾಡಹಾಗಲವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದು ಕೂಡ ಇದೇ ಕೇಂದ್ರ. ಈ ತರಕಾರಿ ಮೇಲೆಯೂ ಇಲ್ಲಿ ಸಾಕಷ್ಟು ಸಂಶೋಧನೆಗಳು ಆಗಿವೆ. ನಂತರ ಇಲ್ಲಿಂದ ಗಿಡಗಳನ್ನು ರೈತರಿಗೆ ಕೊಡಲಾಗಿದ್ದು. ದೊಡ್ಡ ಸಂಖ್ಯೆಯಲ್ಲಿ ರೈತರು ಗಿಡಗಳನ್ನು ಖರೀದಿಸಿ ಮಾಡಹಾಗಲ ಬೆಳೆಯುತ್ತಿದ್ದಾರೆ. ಬಟರ್‌ಫ್ರೂಟ್‌ನಲ್ಲೂ ಈ ಕೇಂದ್ರದ ಮೂಲಕ ಸ್ಥಳೀಯ ತಳಿ ಅಭಿವೃದ್ಧಿ ಪಡಿಸಲಾಗಿದ್ದು, ಕೂರ್ಗ್ ಅರ್ಕಾ ರವಿ ಎಂದು ಹೆಸರಿಡಲಾಗಿದೆ.

ಕಿತ್ತಳೆ, ರ‌್ಯಾಂಬುಟಾನ್, ಮ್ಯಾಂಗೋಸ್ಟೀನ್, ಕೋಕಮ್, ಮಲಬಾರ್ ಹುಣಸೆಹಣ್ಣು, ಗಾರ್ಸಿನಿಯಾ, ಆಂಥೋರಿಯಂ ಜಾತಿಯ ಹೂವುಗಳು, ಬಟರ್‌ಫ್ರೂಟ್, ಪ್ಯಾಶನ್ ಫ್ರೂಟ್, ಲಿಚಿ, ಲಾಂಗನ್, ಜಾಮೂನ್, ಕರೋಂಡಾ, ಕರಿಮೆಣಸು, ಗುಲಾಬಿ ಸೇರಿದಂತೆ ಹಲವು ರೀತಿಯ ಗಿಡಗಳನ್ನು ಈ ಕೇಂದ್ರ ರೈತರಿಗೆ ಪೂರೈಸುತ್ತ್ತಿದೆ.

ಇದೀಗ ಈ ಕೇಂದ್ರ ಮೇಲ್ದರ್ಜೆಗೆ ಏರುತ್ತಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭವಾಗಿದೆ. ಕೇಂದ್ರ ಕೃಷಿ ಸಚಿವರು ಈ ಕಾರ್ಯಕ್ಕೆ ಅನುಮೋದನೆ ನೀಡಿದ್ದು, ಕೇಂದ್ರದಲ್ಲಿ ವಿಜ್ಞಾನಿಗಳು ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಾಗಲಿದೆ. ಹೆಚ್ಚುವರಿ ಅನುದಾನವೂ ಸರ್ಕಾರದಿಂದ ಬಿಡುಗಡೆ ಆಗಲಿದೆ. ಮೂಲಭೂತ ಸೌಕರ್ಯ, ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯವಿರುವ ಸಹಕಾರಗಳೂ ಕೇಂದ್ರ ಸರ್ಕಾರದಿಂದ ಬರಲಿದ್ದು, ಕೆಲವೇ ದಿನಗಳಲ್ಲಿ ಆಧುನಿಕ ವ್ಯವಸ್ಥೆಗಳ ಜತೆಗೆ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಸುಸಜ್ಜಿತ ಸಂಶೋಧನಾ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net