

ಮಡಿಕೇರಿ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು ರೂ.೧೫೫.೭೭ ಕೋಟಿ ವಹಿವಾಟು ನಡೆಸಿ ರೂ.೫೪.೯೦ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.
ಸಂಘದಲ್ಲಿ ೧೧೯೫ ಸದಸ್ಯರಿದ್ದು, ಸದಸ್ಯರಿಂದ ಒಟ್ಟು ರೂ.೧.೨೫ ಕೋಟಿ ಪಾಲು ಬಂಡವಾಳವಿದೆ. ಕ್ಷೇಮನಿಧಿ ಸೇರಿ ಇತರೆ ನಿಧಿಗಳು ರೂ.೩.೫೫ ಕೋಟಿ ಹಾಗೂ ನಿರುಖು ಠೇವಣಿ ಸಂಚಯ ಠೇವಣಿ ಹಾಗೂ ಇತರೆ ಠೇವಣಿ ಸೇರಿ ಒಟ್ಟು ರೂ. ೧೯.೭೫ ಕೋಟಿ ಇರುತ್ತದೆ. ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ ೨೦೨೪-೨೫ನೇ ಸಾಲಿನಲ್ಲಿ ರೂ.೨೩.೪೪ ಕೋಟಿ ಲಕ್ಷಗಳ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಮುಖ್ಯ ಕಚೇರಿಯ ಮೇಲ್ಭಾಗದಲ್ಲಿ ಪುಣ್ಯಕೋಟಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಸಂಘದ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಸಂಘದ ವತಿಯಿಂದ ಮಣ್ಣು ಪರೀಕ್ಷಾಕೇಂದ್ರ ತೆರೆಯಲಾಗಿದೆ. ಇದೀಗ ಈ ಸ್ಟ್ಯಾಂಪ್ ಸೌಲಭ್ಯ ನೀಡುತ್ತಿದೆ ಎಂದು ವಿವರಿಸಿದರು.
ಆ.೨೪ರಂದು ಮಹಾಸಭೆ: ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಆ.೨೪ರಂದು ಸಂಘದ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ೨೦೨೪-೨೫ನೇ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ.೧೫ ರಂತೆ ಡಿವಿಡೆಂಟ್ ನೀಡಲು ತೀರ್ಮಾನಿಸಿದೆ. ಸಂಘದ ಸದಸ್ಯ ಸೂದನ ಗಣೇಶ್ ಅವರ ಪುತ್ರಿ ಧನ್ಯ ಪಿಎಚ್‌ಡಿಯಲ್ಲಿ ೫ ಚಿನ್ನದ ಪದಕ ಪಡೆದಿದ್ದು, ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಣಜಾಲು ಕೆ.ಪೂವಯ್ಯ, ನಿರ್ದೇಶಕರಾದ ಬಿ.ಎಂ.ಕಾಶಿ, ಬಟ್ಟೀರ.ಸಿ.ವೇಣುಗೋಪಾಲ್, ಮರದಾಳು ಚೇತನ್, ಚೋಳಪಂಡ.ಎಂ.ವಿಜಯ್ ಉಪಸ್ಥಿತರಿದ್ದರು.