

ಮಡಿಕೇರಿ:
ರೈತರು ತಾವು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ಮೂಲಕ ಲಾಭದಾಯಕ ವ್ಯವಸಾಯ ಸಾಧ್ಯ ಎಂದು ಪುತ್ತೂರು ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಹೇಳಿದರು. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮತ್ತು ಅಧಿಕ ಮೌಲ್ಯದ ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ವತಿಯಿಂದ ಕೇಂದ್ರದ ಆವರಣದಲ್ಲಿ ಗುರುವಾರ ನಡೆದ ಮಾಡಹಾಗಲ ಮತ್ತು ಪ್ಯಾಷನ್‌ಫ್ರೂಟ್ ಹಣ್ಣಿನ ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮಾಡಹಾಗಲ ಮತ್ತು ಪ್ಯಾಷನ್‌ಫ್ರೂಟ್ ಹಣ್ಣಿನ ಆರೋಗ್ಯಕರ ಅಂಶಗಳು, ಮೌಲ್ಯವರ್ಧಿತ ಅಂಶಗಳ ಲಾಭವನ್ನು ರೈತರು ಬಳಸಿಕೊಳ್ಳುವಂತಾಗಬೇಕು. ಈ ಮೂಲಕ ತಮ್ಮ ಆದಾಯ ವೃದ್ಧಿಸಿಕೊಳ್ಳಬೇಕು ಎಂದರು.
ಪ್ರಗತಿ ಪರ ಬೆಳೆಗಾರ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ ಅಧಿಕ ಮೌಲ್ಯದ ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಸ್ಥಾಪನೆಯ ಉದ್ದೇಶ, ಗುರಿ ಹಾಗೂ ಮಹತ್ವದ ಬಗ್ಗೆ ತಿಳಿಸಿ ಹೆಚ್ವಿನ ರೈತರು ಈ ಸಂಘದ ಸದಸ್ಯರಾಗಬೇಕು ಎಂದರು.
ಹಿರಿಯ ವಿಜ್ಞಾನಿಯೂ ಆದ ಕೇಂದ್ರದ ಪ್ರಭಾರ ಮುಖ್ಯಸ್ಥ ಡಾ. ಬಿ.ಎಂ. ಮುರುಳೀಧರ್ ಮಾತನಾಡಿ ಈ ಕೇಂದ್ರ ಅಭಿವೃದ್ಧಿಪಡಿಸಿದ ಕಾವೇರಿ ತಳಿಯ ಪ್ಯಾಷನ್ ಫ್ರೂಟ್ ಮತ್ತು ಅರ್ಕಾ ಭಾರತ್ ತಳಿಯ ಮಾಡಹಾಗಲ ಕಾಯಿ ವಿಶೇಷತೆಗಳನ್ನು ವಿಸ್ತರಣೆಗೊಳಿಸಿರುವ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಪ್ಯಾಷನ್ ಫ್ರೂಟ್ ಹಣ್ಣಿನ ವೈಜ್ಞಾನಿಕ ಕೃಷಿಯ ಬಗ್ಗೆ ಕೃಷಿ ವಿಜ್ಞಾನಿ ಡಾ. ನಯನ ದೀಪಕ್ ಮತ್ತು ಮಾಡಹಾಗಲ ಕಾಯಿಯ ವೈಜ್ಞಾನಿಕ ಕೃಷಿಯ ಬಗ್ಗೆ ಹಿರಿಯ ವಿಜ್ಞಾನಿ ಡಾ. ರಾಜೇಂದಿರನ್ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊAಡರು. ನಂತರ ರೈತರು - ಕೃಷಿ ವಿಜ್ಞಾನಿಗಳ ಮಧ್ಯೆ ಸಂವಾದ ನಡೆಯಿತು. ಮಾಡಹಾಗಲ ಮತ್ತು ಪ್ಯಾಷನ್‌ಫ್ರೂಟ್ ಹಣ್ಣಿನ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಮಾಡಹಾಗಲ ಮತ್ತು ಪ್ಯಾಷನ್‌ಫ್ರೂಟ್ ಹಣ್ಣಿನ ಕೈಪಿಡಿ ಬಿಡುಗಡೆ ಮಾಡಲಾಯಿತು. ಧಾರವಾಡ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.