ಅಗತ್ಯಕ್ಕೆ ತಕ್ಕ ಶಿಕ್ಷಣ ನೀಡುವ ಸಂಸ್ಥೆಗಳು, ಚೇತನಶ್ರೀ ಪ್ರಶಸ್ತಿ ಸ್ವೀಕರಿಸಿದ ಚಂದ್ರಕಾಂತ ಬೆಲ್ಲದ ಅಭಿಮತ

IMG_20240319_122908_935.jpg
Published on

ಹುಬ್ಬಳ್ಳಿ: ಶಿಕ್ಷಣ ಸಂಸ್ಥೆಗಳು ಇಂದಿನ ಅಗತ್ಯಕ್ಕೆ ತಕ್ಕಂತಹ ವಿದ್ಯೆಯನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದು, ಹೀಗೆ ಕಲಿತ ವಿದ್ಯಾರ್ಥಿಗಳು ತಮ್ಮ ಕುಟುಂಬಕ್ಕೆ ಸೀಮಿತರಾಗದೇ ನಾಡಿನ ಆಸ್ತಿಯಾಗಿ ಬೆಳೆಯುತ್ತಿದ್ದಾರೆ ಎಂದು ಮಾಜಿ ಶಾಸಕ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಭಿಪ್ರಾಯಪಟ್ಟರು.

ಇಲ್ಲಿಯ ಉಣಕಲ್ಲ ಶ್ರೀನಗರದಲ್ಲಿರುವ ಡಿಕೆಎಸ್ ಶಿಕ್ಷಣ ಸಂಸ್ಥೆಯ ಚೇತನ ಬಿಜಿನೆಸ್ ಸ್ಕೂಲ್ ನಲ್ಲಿ ಮಂಗಳವಾರ ಏರ್ಪಡಿಸಿದ್ದ 13ನೇ ಸಂಸ್ಥಾಪನಾ ದಿನದ ಅಂಗವಾಗಿ ಕೊಡಮಾಡಿದ ಚೇತನಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಸಹ ಸರಿಸಮನಾಗಿ ವಿದ್ಯೆ ಕಲಿತು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹರ್ಷದ ಸಂಗತಿ. ಪ್ರಪಂಚದ ಯಾವುದೇ ದೇಶಕ್ಕೆ ಹೋಲಿಸಿದರೂ ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಚೇತನ ಬಿಜಿನೆಸ್ ಸ್ಕೂಲ್ ಸೇರಿ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ದೊಡ್ಡ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಅವಿರತ ಶ್ರಮಿಸುತ್ತಿವೆ. ಶಿಕ್ಷಣ ಪಡೆದ ಎಲ್ಲರೂ ಸಂಸ್ಕಾರವಂತರಾಗಿ ಹೊರಹೊಮ್ಮಲಿ ಎಂದು ಆಶಿಸಿದರು.

ಸಾನ್ನಿಧ್ಯ ವಹಿಸಿದ್ದ ಸುಕ್ಷೇತ್ರ ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುವುದು ಶಿಕ್ಷಣ ಸಂಸ್ಥೆಗಳಲ್ಲಿ. ಹಾಗಾಗಿ ಹತ್ತು ದೇವಸ್ಥಾನ ಕಟ್ಟುವುದಕ್ಕಿಂತ ಒಂದು ಶಾಲೆ ನಿರ್ಮಾಣ ಮಾಡು ಎಂದು ಬಲ್ಲವರು ಹೇಳಿದ್ದಾರೆ. ನಿಜವಾದ ಆಸ್ತಿ, ಸಂಪತ್ತು ಎಂದರೆ ಅದು ವಿದ್ಯೆ, ನೆಮ್ಮದಿಯ ಬದುಕು ಎಂದು ಪ್ರತಿಪಾದಿಸಿದರು.

ಆಧುನಿಕ ಜಗತ್ತಿನಲ್ಲಿ ಮೊಬೈಲ್ ಇಲ್ಲದೇ ಜೀವನ ಇಲ್ಲ ಎಂಬಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಒಂದು ದಿನ ಮೊಬೈಲ್ ನಿಂದ ದೂರ ಇದ್ದರೆ ಅದೇ ಉಪವಾಸ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾರು ಕಂಫರ್ಟ್ ಜೋನ್ ನಲ್ಲಿ ಇರುತ್ತಾರೋ ಅವರಿಂದ ಸಾಧನೆ ಸಾಧ್ಯವಿಲ್ಲ, ಕೊರತೆಯಾದರೆ ಮಾತ್ರ ಏನನ್ನಾದರೂ ಮಾಡಲು ಪ್ರೇರಣೆ ನೀಡುತ್ತದೆ. ಕೇವಲ ಆಕರ್ಷಕ ವ್ಯಕ್ತಿಯಾಗದೇ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಿಕೆಎಸ್ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು.

ಶಾಸಕ, ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮುರುಗೇಶ ಸಿದ್ನಾಳ, ಪ್ರೊ. ಜಗದೀಶ ದ್ಯಾವಪ್ಪನವರ, ಶೈಕ್ಷಣಿಕ ನಿರ್ದೇಶಕ ಡಾ. ರಮಾಕಾಂತ ಕುಲಕರ್ಣಿ, ಪ್ರೊ. ಪ್ರಶಾಂತ ಗಾಮನಗಟ್ಟಿ, ಇತರರು ಇದ್ದರು.

ಡಾ. ಅಶೋಕ ವಡಕಣ್ಣವರ ಸ್ವಾಗತಿಸಿದರು. ಸ್ಕೂಲ್ ನಿರ್ದೇಶಕ ಡಾ. ವಿ.ಎಂ. ಕೊರವಿ, ಸ್ಕೂಲ್ ನಡೆದು ಬಂದ ದಾರಿ ಕುರಿತು ವಿವರಿಸಿದರು. ಡಾ. ಎ.ಎಚ್. ಚಚಡಿ ಸಂಸ್ಥಾಪನ ದಿನದ ಬಗ್ಗೆ ಮಾಹಿತಿ ನೀಡಿದರು. ಡಾ. ಭಾರ್ಗವ ಹಾಗೂ ಸಂಗಡಿಗರು ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಪ್ರೊ. ಭಾಗ್ಯಶ್ರೀ ಬಳಿಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net