ಪ್ರಗತಿಯತ್ತ ಸಾಗುತ್ತಿರುವ ಚೆಟ್ಟಳ್ಳಿ ಸಂಘ

28sunti01
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಮಾತನಾಡಿದರು. ಅಯ್ಯಂಡ್ರರಾಘವಯ್ಯ, ಪೂಣ್ಣಚ್ಚ, ನಂದಿನಿ ಇತರರು ಇದ್ದರು.
Published on

ಸುಂಟಿಕೊಪ್ಪ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರ ಹಿತಾಸಕ್ತಿ ಕಾಪಾಡಿಕೊಂಡು ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸುತ್ತಾ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಹೇಳಿದರು.

ನರೇಂದ್ರ ಮೋದಿ ಭವನದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘವು ಚೆಟ್ಟಳ್ಳಿ ವ್ಯಾಪ್ತಿಯ ವಿವಿಧ ಸಮಾಜಕ್ಕೆ ಹಾಗೂ ಐನ್‌ಮನೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದು, ರೈತರು ಆರ್ಥಿಕವಾಗಿ ಸದೃಢವಾಗಲು ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಸಹಕಾರ ಸಂಘದಲ್ಲಿ ಈ ಹಿಂದೆ ಮನೆಯಲ್ಲಿ ಗಂಡ, ಹೆಂಡತಿ ಮಾತ್ರ ಸದಸ್ಯರಾಗುತ್ತಿದ್ದರು. ಈಗ ಕುಟುಂಬದ ಮಕ್ಕಳನ್ನು ಸದಸ್ಯರನ್ನಾಗಿಸಲಾಗುತ್ತಿದೆ. ಸಂಘದ ಸದಸ್ಯರು ಮಕ್ಕಳಿಗೆ ಪ್ರೋತ್ಸಾಹ ಧನವನ್ನು ಸಹ ನೀಡಲಾಗುತ್ತಿದೆ. ಕೃಷಿ ಸಾಲ, ಗೊಬ್ಬರ ಸಾಲ, ಜಮೀನು ಸಾಲ, 25 ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಾಲ ನೀಡುತ್ತಿದ್ದೇವೆ. ಸಕಾಲದಲ್ಲಿ ಸಾಲ ಮರುಪಾವತಿಯಾಗುತ್ತಿದೆ ಎಂದು ಹೇಳಿದರು.

ಸದಸ್ಯರಾದ ಅಯ್ಯಂಡ್ರರಾಘವಯ್ಯ ಮಾತನಾಡಿ, ಸಂಘದ ಬೆಳೆಗಾರರ ಕಾಫಿ ಗುಣಮಟ್ಟ ಪರಿಶೀಲನೆಗೆ ತೇವಾಂಶ ಯಂತ್ರ ಅಳವಡಿಸಿದ್ದು, ಸದಸ್ಯರಿಗೆ ಪ್ರಯೋಜನವಾಗಿದೆ. ಕಾಫಿ ಕೊಯ್ಲು ಸಂದರ್ಭದಲ್ಲಿ ಬೆಳೆಗಾರರು ಅಧಿಕ ಸಂಖ್ಯೆಯಲ್ಲಿ ಬರುವುದರಿಂದ ಎಲ್ಲರಿಗೂ ಸಕಾಲದಲ್ಲಿ ಪ್ರಯೋಜನ ಲಭಿಸುತ್ತಿಲ್ಲ. ಇದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ. ಕಾಫಿ ಮಂಡಳಿಗೆ ಚಿಕ್ಕಮಗಳೂರಿನ ಬೆಳೆಗಾರರನ್ನೇ ಕೇಂದ್ರದ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಅವರನ್ನು ಈ ಸಂಘಕ್ಕೆ ಕರೆಯಿಸಿ ಬೆಳೆಗಾರರ ವಿಚಾರ ಗೋಷ್ಠಿ ನಡೆಸಬೇಕೆಂದು ಸಲಹೆ ನೀಡಿದರು.

ಸಂಘದ ಉಪಾಧ್ಯಕ್ಷ ಪೂಣ್ಣಚ್ಚ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ, ನಿರ್ದೇಶಕರಾದ ಬಿ.ಎಂ.ಕಾಶಿ, ಮುಳ್ಳಂಡ ಮಾಯಮ, ಕೊಂಗೇಟಿರ ವಾಣಿ ಕಾಳಪ್ಪ, ಪುತ್ತೇರಿರ ಶಿವುನಂಜಪ್ಪ, ಅಕ್ಕಾರಿ ದಯಾನಂದ, ಬಟ್ಟೀರ ವೇಣುಗೋಪಾಲ್, ಕರ್ಣಯ್ಯನ ಪ್ರಜ್ವಲ್, ಮರದಾಳು ಚೇತನ, ಪಿ.ಟಿ.ಗಣೇಶ, ಚೋಳಪಂಡ ವಿಜಯ, ಮುಕ್ಕಾಟಿ ಪಳಂಗಪ್ಪ, ಅರ್ಥಿಕ ಬ್ಯಾಂಕ್ ಪ್ರತಿನಿಧಿ ಮಮತಾ, ಲೆಕ್ಕ ಪರಿಶೋಧಕ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net