

ಹುಬ್ಬಳ್ಳಿ : ಹುಬ್ಬಳ್ಳಿ ಚೆಸ್ ಅಕಾಡೆಮಿ ವತಿಯಿಂದ ಚೆಸ್ ಟೂರ್ನಾಮೆಂಟ್ ‘ಎನ್ಎಲ್ಇ ರೋಟರಿ ಟ್ರೋಫಿ’ ಅನ್ನು ಆ. 3ರಂದು ಇಲ್ಲಿನ ದೇಶಪಾಂಡೆ ನಗರದ ರಾಘವೇಂದ್ರ ಸಭಾ ಭವನದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚೆಸ್ ಟೂರ್ನಾಮೆಂಟ್ ಉಸ್ತುವಾರಿ ಗುರುರಾಜ ಕುಲಕರ್ಣಿ, ಎನ್ಎಲ್ಇ ಸೊಸೈಟಿಯ ಸಹಯೋಗದೊಂದಿಗೆ ಈ ಟೂರ್ನಾಮೆಂಟ್ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
8 ವರ್ಷದೊಳಗಿನ, 12 ವರ್ಷದೊಳಗಿನ, 16 ವರ್ಷದೊಳಗಿನ ಹಾಗೂ 25 ವರ್ಷದೊಳಗಿನವರ ಒಟ್ಟು ನಾಲ್ಕು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ನಾಲ್ಕೂ ವಿಭಾಗಳಲ್ಲಿನ ವಿಜೇತರಿಗೆ 40 ಟ್ರೋಫಿ ಹಾಗೂ 40 ಮೆಡಲ್ಗಳನ್ನು ನೀಡಲಾಗುವುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.
ವಿಜೇತರಿಗೆ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಭಾಗವಹಿಸಲು ಅವಕಾಶ ನೀಡಲಾಗುವುದು. ಆಸಕ್ತರು ಆ. 1ರೊಳಗೆ ಹೆಸರು ನೋಂದಾಯಿಸಬೇಕು. 3 ರಂದು ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಟೂರ್ನಾಮೆಂಟ್ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು.
ಎನ್ಎಲ್ಇ ಸೊಸೈಟಿಯ ಜಂಟಿ ಕಾರ್ಯದರ್ಶಿ ಸದಾನಂದ ಕಾಮತ ಸುದ್ದಿಗೋಷ್ಠಿಯಲ್ಲಿ ಇದ್ದರು.