

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ವತಿಯಿಂದ 44ನೆಯ ಚೆಸ್ ಒಲಿಂಪಿಯಾಡ್ ನ ರಿಲೇ ಜ್ಯೋತಿಯ ಸ್ವಾಗತ ಸಮಾರಂಭ ಜು.19ರಂದು ಬೆಳಗ್ಗೆ 8 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿರುವರು. ಸಭಾ ಕಾರ್ಯಕ್ರಮಕ್ಕೆ ಮೊದಲು ಬೆಳಗ್ಗೆ 7 ಕ್ಕೆ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಬೈಕ್ ಮತ್ತು ಕಾರು ಜಾಥಾವು ಲೇಡಿಹಿಲ್, ಬಳ್ಳಾಲ್‌ಬಾಗ್, ಪಿ.ವಿ.ಎಸ್. ನವಭಾರತ್ ಸರ್ಕಲ್, ಹಂಪನಕಟ್ಟಾ ಮಾರ್ಗವಾಗಿ ಕುದ್ಮುಲ್ ರಂಗರಾವ್ ಪುರಭವನಕ್ಕೆ ಆಗಮಿಸಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯೂತ್ ಆಫೀಸರ್ ರಘುವೀರ್ ಸೂಟರ್ ಪೇಟೆ ಶನಿವಾರ ಮಂಗಳೂರು ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತದ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಹಾಗೂ ಕೆಲವೇ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಒಟ್ಟು ದೇಶದ 75 ಕೇಂದ್ರಗಳಲ್ಲಿ 44ನೇ ಚೆಸ್ ಒಲಿಂಪಿಯಾಡ್ ಡ್ ಟಾರ್ಚ್ ಲೈಟ್ ಸಂಚರಿಸಲಿದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ಈ ಸುವರ್ಣವಕಾಶ ದೊರೆತಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ನೆಹರು ಯುವ ಕೇಂದ್ರ, ಮಂಗಳೂರು NSS, NCC ಚೆಸ್ ಫೆಡರೇಶನ್ ಯುವ ಮಂಡಳಗಳು ಮಂಗಳೂರು ಸರ್ಫ್ ಕ್ಲಬ್ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.