

ಮೈಸೂರು: ಚದುರಂಗ (ಚೆಸ್) ಕೇವಲ ಆಟ ಮಾತ್ರವಲ್ಲದೆ ಬುದ್ಧಿಮತ್ತೆ, ತಂತ್ರಜ್ಞಾನ, ಯುದ್ಧತಂತ್ರ ಮತ್ತು ಮಾನಸಿಕ ಶಕ್ತಿಯ ಸಂಕೇತವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಅಭಿಪ್ರಾಯಪಟ್ಟರು.
ನಗರದ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಪಿಡ್ ಚೆಸ್ ಪಂದ್ಯಾವಳಿ -2025ಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವದ ಅತ್ಯಂತ ಪುರಾತನ ಬುದ್ಧಿಮತ್ತೆಯ ಆಟಗಳಲ್ಲಿ ಒಂದಾಗಿರುವ ಚೆಸ್ನ ಮೂಲವೂ ಭಾರತದಲ್ಲಿದೆ. ಈ ಆಟವು ಶತಮಾನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ, ಭೌಗೋಳಿಕ ಹಾಗೂ ರಾಜಕೀಯ ಬದಲಾವಣೆಗಳನ್ನು ಅನುಭವಿಸಿದೆ ಎಂದರು.
ಚದುರಂಗವು ಕಲ್ಪನೆ, ತಂತ್ರಜ್ಞಾನ, ರಾಜಕೀಯ ಯುದ್ಧ ಮತ್ತು ಕೌಶಲಗಳ ಸಂಯೋಜನೆಯಾಗಿದೆ. ಚದುರಂಗ ಆಟದ ಮೂಲವನ್ನು 6ನೇ ಶತಮಾನದಲ್ಲಿ ಭಾರತದಲ್ಲಿ ಕಂಡುಹಿಡಿಯಲಾಗಿದೆ ಎಂದು ತಿಳಿಸಿದರು.
ಸಂಸ್ಕೃತದಲ್ಲಿ ಚತುರ್ ಎಂದರೆ ನಾಲ್ಕು ಮತ್ತು ಅಂಗ ಎಂದರೆ ಅಂಗಗಳು ಅಥವಾ ಘಟಕಗಳು. ಈ ನಾಲ್ಕು ಘಟಕಗಳು ಪ್ರಾಚೀನ ಯುದ್ಧದ ಮುಖ್ಯ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಹಿಂದೆ ಈ ಆಟವನ್ನು ಪ್ರಾಚೀನ ಭಾರತೀಯ ರಾಜಕೀಯ ಮತ್ತು ಯುದ್ಧತಂತ್ರದ ಒಂದು ಮಾದರಿಯಾಗಿ ಬಳಸಲಾಗುತ್ತಿತ್ತು ಎಂದು ವಿವರಿಸಿದರು.
ಭಾರತದಿಂದ ಚದುರಂಗ ಆಟವು ಪರ್ಷಿಯಾಕ್ಕೆ (ಇಂದಿನ ಇರಾನ್) ಹೋದಾಗ ಅದನ್ನು ಶತ್ರಂಜ್ ಎಂದು ಕರೆಯಲಾಯಿತು. ಪರ್ಷಿಯನ್ ಸಾಮ್ರಾಜ್ಯದಲ್ಲಿ ಈ ಆಟ ಹೆಚ್ಚು ಜನಪ್ರಿಯವಾಯಿತು. ಮತ್ತು ನಂತರ ಅರಬ್ ಸಾಮ್ರಾಜ್ಯದ ಮೂಲಕ ಪಶ್ಚಿಮ ವಿಶ್ವಕ್ಕೆ ಪ್ರವೇಶಿಸಿತು ಎಂದು ತಿಳಿಸಿದರು.
19ನೇ ಶತಮಾನದಲ್ಲಿ ಚೆಸ್ ಆಟವನ್ನು ಹೆಚ್ಚು ನಿಯಮಬದ್ಧವಾಗಿ ರೂಪಿಸಲಾಯಿತು. ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ 1924ರಲ್ಲಿ ಸ್ಥಾಪಿತವಾಯಿತು. ಇದು ವಿಶ್ವದ ಚೆಸ್ ಆಟಗಾರರನ್ನು ಒಂದುಗೂಡಿಸುವ ಕೇಂದ್ರ ಸಂಸ್ಥೆಯಾಗಿದೆ. ಆಧುನಿಕ ಯುಗದಲ್ಲಿ, ಚೆಸ್ ಆಟವು ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಹೊಸ ಪ್ರಭಾವವನ್ನು ಗಳಿಸಿದೆ ಎಂದರು.
ಭಾರತೀಯ ಚೆಸ್ ಪಿತಾಮಹ ಎಂದೇ ಪರಿಗಣಿಸುವ ವಿಶ್ವನಾಥನ್ ಆನಂದ್, ಪೆಂಟಲಾ ಹರಿಕೃಷ್ಣ, ಗುಕೇಶ್ಕುಮಾರ್ ಸೇರಿದಂತೆ ಅನೇಕರು ಚೆಸ್ಗೆ ಹೊಸ ದಿಕ್ಕು ತೋರಿಸಿದ್ದಾರೆ. ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳು, ಯುವ ಜನಾಂಗ ಸಾಧನೆ ಮಾಡಬೇಕು ಎಂದು ಹೇಳಿದರು.
ನೆಹರು ಯುವಕ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಎನ್.ನಟರಾಜ್ ಮಾತನಾಡಿ, ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಉತ್ತಮ ಮೂಲಸೌಕರ್ಯದ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅಡಿಯಲ್ಲಿ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ, ವೈಜ್ಞಾನಿಕ, ಪರಿಸರ ಕಾಳಜಿ, ಕ್ರೀಡೆಗಳಿಗೂ ಒತ್ತು ನೀಡುತ್ತಿರುವುದಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿ ಎಲ್.ರವಿ, ಶಾಲೆಯ ಪ್ರಾಂಶುಪಾಲೆ ಡಾ.ದೀಪ್ತಿ ಚತುರ್ವೇದಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ 34 ಶಾಲೆಗಳಿಂದ 112 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಇದ್ದರು.