

ಮಹಾಲಿಂಗಪುರ: ಭಾರತೀಯರು ಜಗತ್ತಿಗೆ ಕೊಟ್ಟ ಬಹು ದೊಡ್ಡ ಕೊಡುಗೆ ಚದುರಂಗದ ಆಟ. ಇದು ಜಾಣ-ಜಾಣೆಯರ ಆಟ. ಇಂದು ವಿಶ್ವ ಮಾನ್ಯವಾಗಿದೆ ಎಂದು ಸ್ಥಳೀಯ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ಶ್ರೀ ಬಸವಾನಂದ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಬಾಗಲಕೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಧೋಳ, ಶ್ರೀ ಬಸವಾನಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಹಾಲಿಂಗಪುರ ಇವರ ಸಹಯೋಗದಲ್ಲಿ ಇತ್ತೀಚೆಗೆ ಜರುಗಿದ ಮುಧೋಳ ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಟ್ಟದ ಚೆಸ್ ಕ್ರೀಡಾಕೂಟವನ್ನು ಚೆಸ್ ಕಾಯಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಆಟದಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ ಸೋಲು ಗೆಲವು ಮುಖ್ಯ ಅಲ್ಲ ಎಂದರು.
ಶಾಲೆಯ ನಿರ್ದೇಶಕ ಡಾ. ಬಿ.ಡಿ. ಸೋರಗಾಂವಿ ಮಾತನಾಡಿ, ಭಾರತೀಯರಾದ ನಾವು ವಿಶ್ವಕ್ಕೆ ಕೊಡುಗೆ ಕೊಡುತ್ತೇವೆ. ಆದರೆ ಅದನ್ನು ಕಲಿತು ವಿದೇಶಿಗರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಕಲಿಸಿದವರು ನಾವು ಹಿಂದೆ ಉಳಿಯುತ್ತೇವೆ. ಇದು ವಿಪರ್ಯಾಸವೇ ಸರಿ. ಹಾಕಿ, ಕಬಡ್ಡಿ, ಚೆಸ್, ಇನ್ನು ಅನೇಕ ಆಟಗಳು ನಮ್ಮ ದೇಶದ ಹೆಮ್ಮೆಯ ಆಟಗಳು. ಆದರೆ ಇಂದಿನ ಪೀಳಿಗೆ ಇಂಗ್ಲಿಷರ ಆಟವಾದ ಕ್ರಿಕೆಟನ್ನು ದೇವರಂತೆ ಪೂಜಿಸುತ್ತಿರುವುದು ಸ್ಟಾರ್ ಆಟಗಾರರನ್ನು ದೇವರಂತೆ ಆರಾಧಿಸುತ್ತಿರುವುದು ವಿಷಾದದ ಸಂಗತಿ ಎಂದರು.
ಮುಧೋಳ ತಾಲೂಕಾ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಎಸ್.ಎಂ. ಕುರಣಿ ಮಾತನಾಡಿದರು. ಶಾಲೆಯ ಟ್ರಸ್ಟ್ ಕಮಿಟಿ ಸದಸ್ಯ ಚನ್ನಪ್ಪ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗಣ್ಯರಾದ ಕಲ್ಲಪ್ಪ ಚಿಂಚಲಿ, ಮಹಾದೇವಪ್ಪಾ ಅಂಗಡಿ, ಪ್ರಭು ಬೆಳಗಲಿ, ಎಸ್.ಎಂ. ಕಟಗಿ, ಶಿವಾನಂದ ತಾಳಿಕೋಟಿ ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಪ್ರೌಢ ಶಾಲಾ ವಿಭಾಗದ ವಲಯ ಮುಖ್ಯಸ್ಥ ಪಿ.ಸಿ. ಪಕೀರನವರ, ರಬಕವಿ ಬನಹಟ್ಟಿ ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಖರ್ತಿಹಾಳ, ಮುಖ್ಯ ಶಿಕ್ಷಕ ಎಸ್.ಕೆ. ಗಿಂಡೆ, ಶಿಕ್ಷಕ ಸಿದ್ದರೂಢ ಮುಗಳಖೋಡ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಎಸ್.ಡಿ. ಕಾಂಬಳೆಕರ ಸ್ವಾಗತಿಸಿದರು. ಶಿಕ್ಷಕ ಹುಮಾಯಿನ ಸುತಾರ ನಿರೂಪಿಸಿದರು.
ಮುಧೋಳ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ನೂರಾರು ಚೆಸ್ ಕ್ರೀಡಾ ಪಟುಗಳು ಇದ್ದರು.