

ಪ್ರಕಾಶ್ ಮಂಜೇಶ್ವರ ಮಂಗಳೂರು
ಸುಮಾರು 20 ವರ್ಷ ಹಿಂದೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ರಾತ್ರಿ 9.15ಕ್ಕೆ ಚೆರ್ವತ್ತೂರಿಗೆ ಹೊರಡುತ್ತಿದ್ದ ಪ್ಯಾಸೆಂಜರ್ ರೈಲು ಏಕಾಏಕಿ ನಿಲ್ಲಿಸಿದಾಗ ಆತಂಕಪಟ್ಟವರು ಮುಖ್ಯವಾಗಿ ತೊಕ್ಕೊಟ್ಟು, ಉಳ್ಳಾಲ ಮಂಜೇಶ್ವರ, ಉಪ್ಪಳ, ಕುಂಬಳೆ ಗಡಿಪ್ರದೇಶದ ಪ್ರಯಾಣಿಕರು.
ಯಾಕೆಂದರೆ, ಹಗಲು ದುಡಿದು ರಾತ್ರಿ ಮಂಗಳೂರು ನಗರದ ಸಂಜೆ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಕಾಸಗೋಡಿನಲ್ಲಿರುವ ಮನೆಗೆ ವಾಪಸ್ ತೆರಳುವ ಯುವಕರಿಗೆ ಈ ರೈಲು ಉಪಯುಕ್ತವಾಗಿತ್ತು. ಮಂಗಳೂರಿನ ವಿವಿಧ ಸಂಸ್ಥೆ, ಮಳಿಗೆ ಹಾಗೂ ಸಂಸ್ಥೆಗಳಲ್ಲಿ ಸಣ್ಣ ವೇತನದಲ್ಲಿ ರಾತ್ರಿ 8- 8.30 ಗಂಟೆ ತನಕ ದುಡಿಯುವವರಿಗೆ ಈ ರೈಲು ಹೆಚ್ಚಿನ ಉಪಯೋಗಕ್ಕೆ ಬೀಳುತ್ತಿತ್ತು.
ದಿನಂಪ್ರತಿ ಸಾಯಂಕಾಲ 05.05ಕ್ಕೆ ಪ್ಯಾಸೆಂಜರ್ ರೈಲು ಬಳಿಕ ಮಂಗಳೂರಿನಿಂದ ಕಾಸರಗೋಡು ಕಡೆಗೆ ಯಾವುದೇ ಪ್ಯಾಸೆಂಜರ್ ರೈಲುಗಳಿಲ್ಲ. 5.30ಕ್ಕೆ ತಿರುವನಂತಪುರಕ್ಕೆ ಪ್ರಯಾಣಿಸುವ ಮಾವೇಲಿ ಎಕ್ಸ್‌ಪ್ರೆಸ್ ಮತ್ತು 6.15ಕ್ಕೆ ಮಲಬಾರ್ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಕಾಸರಗೋಡು ಕಡೆಗೆ ಪ್ರಯಾಣಿಸುತ್ತದೆ. ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ ಹೊರಡುವ ಮಂಗಳೂರು ಸೆಂಟ್ರಲ್-ಯಶವಂತಪುರ (ಶೊರ್ನೂರು ಮೂಲಕ) ಎಕ್ಸ್‌ಪ್ರೆಸ್, ಪ್ರತಿ ಬುಧವಾರ ಮತ್ತು ಶನಿವಾರ ರಾತ್ರಿ 8ಕ್ಕೆ ಹೊರಡುವ ಕಾಚಿಗುಡ ಎಕ್ಸ್‌ಪ್ರೆಸ್ ಇದೆಯಾದರೂ ಈ ರೈಲುಗಳು ಎಕ್ಸ್‌ಪ್ರೆಸ್ ಆಗಿರುವ ಕಾರಣ ಕಾಸರಗೋಡಿನವರಿಗೆ ಇದರಿಂದ ಅನುಕೂಲವಿಲ್ಲ.
ಒಂದು ಕಾಲದಲ್ಲಿ ಕರ್ನಾಟಕದ ಭಾಗವೇ ಆಗಿದ್ದ ಕಾಸರಗೋಡು ಗಡಿನಾಡಿನ ಹೆಚ್ಚಿನ ಕನ್ನಡಿಗರು ಹೆಚ್ಚಿನವರು ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿ ಇಂದಿಗೂ ಹತ್ತಿರದ ಮಂಗಳೂರು ಹಾಗೂ ಆಸುಪಾಸಿನ ನಗರಗಳನ್ನು ಅವಲಂಬಿಸಿದ್ದಾರೆ. ಮಂಜೇಶ್ವರ, ಹೊಸಂಗಡಿ, ಉಪ್ಪಳ, ಬಂದ್ಯೋಡು, ಕುಂಬಳೆ ಮುಂತಾದ ಸಹಸ್ರಾರು ಜನರು ಮಂಗಳೂರಿನಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ವಿಶೇಷ ರಿಯಾಯಿತಿ ದರದಲ್ಲಿ ಸೀಸನ್ ಟಿಕೆಟ್‌ನಲ್ಲಿ ರೈಲು ಪ್ರಯಾಣ ಇವರಿಗೆ ಆರ್ಥಿಕವಾಗಿ ಹೆಚ್ಚಿನ ಅನುಕೂಲ ಒದಗಿಸುತ್ತದೆ. ಉದಾಹರಣೆಗೆ, ನೂರು ರೂ. ನೀಡಿ ಸೀಸನ್ ಟಿಕೆಟ್ ಮಾಡಿಕೊಳ್ಳುವ ಪ್ರಯಾಣಿಕ ತಿಂಗಳು ಪೂರ್ತಿ ಮಂಜೇಶ್ವರ ಮತ್ತು ಮಂಗಳೂರು ನಡುವೆ ಪ್ರಯಾಣಿಸಬಹುದು.
ಪ್ರಸ್ತುತ ದಿನಂಪ್ರತಿ ಸಾಯಂಕಾಲ 5.30ಕ್ಕೆ ಕಣ್ಣೂರಿನಿಂದ ಹೊರಟು ಸುಮಾರು 6.35ಕ್ಕೆ ಚೆರ್ವತ್ತೂರು ತಲುಪುವ ಒಂದು ಪ್ಯಾಸೆಂಜರ್ ರೈಲು ರಾತ್ರಿ ಅಲ್ಲಿಯೇ ತಂಗುತ್ತದೆ. ಈ ರೈಲು ಮರುದಿನ ಬೆಳಗ್ಗೆ 6.10 ಕ್ಕೆ ಚೆರ್ವತ್ತೂರಿನಿಂದ ಹೊರಟು 8.30ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ. ಈ ರೈಲು ಸಾಯಂಕಾಲ 5.30ಕ್ಕೆ ಹೊರಟು 6.30ಕ್ಕೆ ಚೆರ್ವತ್ತೂರು ತಲುಪಿ ಅಲ್ಲಿಯೇ ಪ್ರಯಾಣ ಮೊಟಕುಗೊಳಿಸುವ ಬದಲು ಮಂಗಳೂರಿಗೆ ಪ್ರಯಾಣ ಹೊರಟು ರಾತ್ರಿ ಸುಮಾರು 8.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಬೇಕು. ಇದೇ ರೈಲು ರಾತ್ರಿ ಮಂಗಳೂರು ಸೆಂಟ್ರಲ್‌ನಿಂದ ದಿನಂಪ್ರತಿ ರಾತ್ರಿ 9.15 ಕ್ಕೆ ಚೆರ್ವತ್ತೂರಿಗೆ ಹೊರಡುವಂತೆ ಯೋಜನೆ ರೂಪಿಸ ಬಹುದು ಎಂಬುದು ಪಶ್ಚಿಮ ರೈಲ್ವೆ ಯಾತ್ರಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ಅವರ ಸಲಹೆ.
ಪ್ಯಾಸೆಂಜರ್ ರಾತ್ರಿ ರೈಲು ಇದ್ದ ಕಾರಣ ನಾನು 1992ರಲ್ಲಿ ಮಂಗಳೂರಿನ ಸಂಜೆ ಕಾಲೇಜಿನಲ್ಲಿ ಬಿಎ ಪದವಿ ಪಡೆಯಲು ಸಾಧ್ಯ ವಾಯಿತು. ಹಗಲು ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ದುಡಿದು ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿದ್ದೆ. ಈ ರೈಲಿನಿಂದ ಗಡಿನಾಡಿನ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳಿಗೆ ಉಪಕಾರವಾಗುತ್ತಿತ್ತು. ಈ ರೈಲು ಮತ್ತೆ ಆರಂಭಿಸಿದರೆ, ಹೆಚ್ಚಿನವರಿಗೆ ಪ್ರಯೋಜನವಾಗುತ್ತದೆ.- ದೀಪಕ್ ಮಂಜೇಶ್ವರ https://www.vijayavani.net/laddu-gopal-saved-me-woman-who-cancelled-her-june-2-journey-in-coromandel-express