ಚೇರು ಶಾಲೆ ಕಣ್ಣಾಮುಚ್ಚಾಲೆ - ಮಕ್ಕಳಿದ್ದರೂ ತೆರೆಯುವುದಿಲ್ಲ - ದಾಖಲೆಯಲ್ಲಿ ಮಾತ್ರ ನಡೆಯುತ್ತಿದೆ ವಿದ್ಯಾಮಂದಿರ

PTR_18 JUN_3
Published on

ಪುತ್ತೂರು: ದಾಖಲೆಯಲ್ಲಿ ಮಕ್ಕಳಿದ್ದು ನಿತ್ಯ ಪಾಠ ಪ್ರವಚನ ನಡೆಯುತ್ತಿದೆ ಎಂದು ಹೇಳಲಾಗಿದೆಯಾದರೂ, ವಾಸ್ತವವಾಗಿ ಶಾಲೆಯ ಬಾಗಿಲು ತೆರೆಯದೆ ದಿನಗಳೇ ಕಳೆದಿವೆ. ಸ್ಥಳೀಯ ಪಂಚಾಯಿತಿಗೂ ಶಾಲೆಯನ್ನು ಮುಚ್ಚಿರುವ ಕುರಿತು ಇದುವರೆಗೆ ಮಾಹಿತಿ ಇಲ್ಲ. ಊರಿನವರಿಗೆ ಶಾಲೆ ಉಳಿಯಬೇಕೆಂಬ ಆಸೆಯಿದ್ದರೂ, ಶಾಲಾಭಿವೃದ್ಧಿ ಸಮಿತಿಯ ನಿರಾಸಕ್ತಿಗೆ ಸರ್ಕಾರಿ ಶಾಲೆಯೊಂದು ಸದ್ದಿಲ್ಲದೆ ಬೀಗ ಜಡಿಯುವ ಹಂತಕ್ಕೆ ತಲುಪಿದೆ.


ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ದ. ಕ. ಜಿ. ಪಂ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಮಾರು ೬೫ ವರ್ಷದ ಇತಿಹಾಸವನ್ನು ಹೊಂದಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ ೧೩ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾತಿ ಇರಲಿಲ್ಲವಾದರೂ, ೨ ಹಾಗೂ ೪ನೇ ತರಗತಿಯಲ್ಲಿ ತಲಾ ೧, ೩ನೇ ತರಗತಿಯಲ್ಲಿ ೩, ೫ಮೇ ತರಗತಿಯಲ್ಲಿ ೫ ಮಕ್ಕಳು ಇದ್ದರು.


ಪಕ್ಕದಲ್ಲೇ ಇರುವ ಅಂಗನವಾಡಿಯಲ್ಲಿ ೯ ಮಕ್ಕಳಿದ್ದು, ಈ ವರ್ಷ ಮೂರು ಮಕ್ಕಳು ಬೇರೆ ಶಾಲೆಯನ್ನು ಹುಡುಕಿಕೊಂಡು ಹೋಗಿದ್ದಾರೆ. ಅವರನ್ನು ಈ ಶಾಲೆಗೆ ಪ್ರವೇಶ ಮಾಡಿಸಿಕೊಳ್ಳದೆ ಶೂನ್ಯ ದಾಖಲಾತಿಯನ್ನು ತೋರಿಸುವ ಕಾರಣ ಏನೆಂಬುದನ್ನು ಇಲಾಖೆಯ ಅಽಕಾರಿಗಳು ತನಿಖೆ ನಡೆಸಬೇಕಾಗಿದೆ. ಶಾಲೆಯ ಸಮಸ್ಯೆಯ ಬಗ್ಗೆ ೨೦೨೩ರ ಅಕ್ಟೋಬರ್ ಕೊನೆಯಲ್ಲಿ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರೂ, ಆ ಬಳಿಕ ಅದನ್ನು ಮುಚ್ಚಿ ಹಾಕುವ ಕಾರ್ಯ ಕಾಣದ ಕೈಗಳಿಂದ ನಡೆದಿದೆ.


ಅತಿಥಿ ಶಿಕ್ಷಕರಿಗೆ ಸರಿಯಾದ ಬಸ್ ಸೌಕರ್ಯ ಇಲ್ಲದ ಕಾರಣ ಅವರಿಗೆ ಶಾಲೆಗೆ ಸಮಯಕ್ಕೆ ತಲುಪಲಾಗುತ್ತಿರಲಿಲ್ಲ. ಸರ್ಕಾರದಿಂದ ಪ್ರಭಾರವಾಗಿ ನೇಮಕಗೊಂಡ ಶಿಕ್ಷಕರು ಊರಿನವರೇ ಆಗಿದ್ದರೂ, ಇಲ್ಲಿಗೆ ದಾಖಲಾತಿಯನ್ನು ನೋಡಿಕೊಳ್ಳುವುದಕ್ಕೆ ಮಾತ್ರ ಬರುವುದು ಪಾಲಕರ ಅಸಮಾಧಾನಕ್ಕೆ ಕಾರಣವಾಗಿ ವಿದ್ಯಾರ್ಥಿಗಳನ್ನು ಬೇರೆ ಕಡೆಗೆ ಕಳುಹಿಸುವ ಹಂತಕ್ಕೆ ತಲುಪಿದೆ.


ಶಾಲೆಯಲ್ಲಿ ಬೇರೆ ಜಿಲ್ಲೆಯ ಶಿಕ್ಷಕರಿದ್ದಾಗ ಮಕ್ಕಳ ಸಂಖ್ಯೆ ೧೧ಕ್ಕೆ ಕುಸಿದು ಶಾಲೆ ಮುಚ್ಚುವ ಹಂತಕ್ಕೆ ಬಂತೆಂದು ಪ್ರತಿಭಟನೆಗೆ ಮುಂದಾದ ಸ್ಥಳೀಯರು ಶಾಲೆಯ ಉಳಿವಿಗಾಗಿ ವಾಹನದ ವ್ಯವಸ್ಥೆಯನ್ನು ಮಾಡಿ ಬೇರೆ ಕಡೆಯಿಂದ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಮೂಲಕ ೨೧ಕ್ಕೆ ಏರಿಕೆ ಮಾಡಿದ್ದರು. ಆದರೆ ಊರಿನ ಶಿಕ್ಷಕರಿಗೆ ಶಾಲೆಯನ್ನು ಮುನ್ನಡೆಸುವ ಕಾಳಜಿ ಇಲ್ಲದ ಕಾರಣದಿಂದ ಇಲಾಖೆಯ ದಾಖಲೆಯಲ್ಲಿ ಶಾಲೆಯನ್ನು ತೆರೆದಂತೆ ಮಾಡಿ ಶಾಶ್ವತವಾಗಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆಂಬ ಮಾತು ಕೇಳಿ ಬಂದಿದೆ.


ನಕ್ಸಲ್ ಪೀಡಿತ ಪ್ರದೇಶ:
ಚೇರು ಭಾಗದಲ್ಲಿ ೨೦೧೨ರ ಸೆಪ್ಟೆಂಬರ್ ನಲ್ಲಿ ನಕ್ಸಲ್ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ಓರ್ವ ವ್ಯಕ್ತಿ ಮೃತ ಪಟ್ಟಿದ್ದ. ೨೦೨೪ರ ಏಪ್ರಿಲ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ತಂಡ ಈ ಭಾಗದ ಮನೆಯೊಂದಕ್ಕೆ ಭೇಟಿ ನೀಡಿತ್ತು. ನಕ್ಸಲ್ ಪೀಡಿತ ಪ್ರದೇಶದಂತೆ ಗುರುತಿಸಿಕೊಂಡಿರುವ ಚೇರು ಭಾಗಕ್ಕೆ ವಿಶೇಷ ಪ್ಯಾಕೇಜ್ ನೀಡಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾದ ಸರ್ಕಾರ ಸದ್ದಿಲ್ಲದೆ ಮುಚ್ಚಲು ಪ್ರೋತ್ಸಾಹ ನೀಡುತ್ತಿದೆ.


ಬೇರೆಡೆಗೆ ತೆರಳಿದರೇ?
ಪ್ರಭಾರ ಶಿಕ್ಷಕನಾಗಿ ನೇಮಕ ಮಾಡಿದ ಕಾರಣದಿಂದ ಮಧ್ಯಾಹ್ನದ ತನಕ ಚೇರು ಶಾಲೆಯಲ್ಲಿ ಇದ್ದು, ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿ ಮಾತೃಶಾಲೆಗೆ ತೆರಳುತ್ತಿದ್ದರು. ಶಾಲೆಗೆ ಸರಿಯಾಗಿ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ಮಕ್ಕಳ ಪಾಲಕರು ಶಾಲೆಯಿಂದ ಟಿ.ಸಿ. ಪಡೆದು ಬೇರೆ ಶಾಲೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇರುವ ಮಕ್ಕಳನ್ನು ಬೇರೆ ಶಾಲೆಗೆ ತೆರಳುವಂತೆ ಒತ್ತಡ ಹೇರುವ ಕಾರ್ಯ ನಡೆದಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.


ಚೇರು ಶಾಲೆ ಇಬ್ಬರು ವಿದ್ಯಾರ್ಥಿಗಳ ಮೂಲಕ ೧೯೫೯ರಲ್ಲಿ ಪ್ರಾರಂಭವಾಗಿದ್ದು, ಕಳೆದ ವರ್ಷ ೧೩ ವಿದ್ಯಾರ್ಥಿಗಳೊಂದಿಗೆ ಶಾಲೆ ನಡೆಯುತ್ತಿತ್ತು. ಈ ವರ್ಷ ಶಾಲೆ ಮುಚ್ಚುವುದು ಎಂದು ಹೇಳಿದ ಕಾರಣ ಇದ್ದ ವಿದ್ಯಾರ್ಥಿಗಳು ಬೇರೆ ಕಡೆಗೆ ಹೋಗುತ್ತಿದ್ದಾರೆ. ಶಾಲೆ ಉಳಿಯಬೇಕೆಂದು ವಿವಿಧ ರೀತಿಯ ಪ್ರಯತ್ನವನ್ನು ಮಾಡಲಾಗಿದೆ. ಸರ್ಕಾರ ಶಾಲೆಯ ಮುಚ್ಚದೆ ಉಳಿಸಿಕೊಡಬೇಕು ಎಂಬುದು ನಮ್ಮ ಕಳಕಳಿಯ ವಿನಂತಿಯಾಗಿದೆ.
| ಪೇರಪ್ಪ ಗೌಡ
ಶಾಲೆಯ ಪ್ರಾರಂಭದ ವಿದ್ಯಾರ್ಥಿ


ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಪಡುತ್ತಿದ್ದು, ಚೇರು ಶಾಲೆ ದಾಖಲೆಯಲ್ಲಿ ತೆರೆದಂತಿದ್ದರೂ, ಬೀಗ ಜಡಿದಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ್ದೇವೆ. ಶಾಲೆಯಲ್ಲಿ ಎಲ್ಲ ಸವಲತ್ತುಗಳು ಉತ್ತಮ ರೀತಿಯಲ್ಲಿ ಇದ್ದರೂ, ಶಾಲೆಯನ್ನು ಮುಚ್ಚಿರುವುದು ಸರ್ಕಾರದ ಅರಿವಿನಲ್ಲಿ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಶಿಕ್ಷಣ ಇಲಾಖೆಯ ದಾಖಲೆಯ ಪ್ರಕಾರ ಶಾಲೆಯಲ್ಲಿ ಹತ್ತು ಮಕ್ಕಳು ಇದ್ದಾರೆಂಬುದನ್ನು ತಿಳಿಸುತ್ತಿದ್ದಾರೆ.
| ಮೊಯ್ದಿನ್ ಕುಟ್ಟಿ
ಸಂಚಾಲಕರು, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ.


ಶಾಲೆಯಲ್ಲಿ ಶಿಕ್ಷಕರಿಲ್ಲ ಎಂಬ ಕಾರಣಕ್ಕೆ ಬೇರೆ ಶಾಲೆಯಿಂದ ಶಿಕ್ಷಕರನ್ನು ಇಲ್ಲಿಗೆ ನೀಡಿದರು. ಕಳೆದ ವರ್ಷ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಪ್ರಭಾರ ಶಿಕ್ಷಕರನ್ನು ನೇಮಿಸಿದ್ದಾರೆ. ಕಳೆದ ವರ್ಷ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಶಿಕ್ಷಣ ಇಲಾಖೆಯಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಾಲೆಗೆ ಸರ್ಕಾರದಿಂದ ಶಾಶ್ವತ ಶಿಕ್ಷಕರನ್ನು ನೀಡಿದರೆ, ಮಕ್ಕಳು ತಕ್ಷಣದಿಂದ ಇಲ್ಲಿಗೆ ಸೇರಿಸುವ ಕೆಲಸ ಮಾಡುತ್ತೇವೆ.
| ಪಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net