ವಿದ್ಯಾದಾನ ಭಾರತದ ಮಣ್ಣಿನಗುಣ: ದತ್ತಾತ್ರೇಯ ಹೊಸಬಾಳೆ

udp-30-rastrottana 2
Published on

ಉಡುಪಿ: ಭಾರತಕ್ಕೆ ವಿಶ್ವಗುರು ಆಗುವ ಎಲ್ಲಾ ಕ್ಷಮತೆ, ಸಾಮರ್ಥ್ಯಗಳಿವೆ. ವಿದ್ಯಾದಾನ ಭಾರತದ ಮಣ್ಣಿನಗುಣ. ಸಾವಿರಾರು ವರ್ಷಗಳಿಂದ ಜಗದ್ವಿಖ್ಯಾತ ವಿದ್ಯಾಕೇಂದ್ರಗಳು ಭಾರತದಲ್ಲಿ ಮೆರೆದಿವೆ. ಹಲವು ಮುಖದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಈ ದೇಶದಲ್ಲಿತ್ತು. ಆದರೆ ಪರಕೀಯರು ದಾಳಿ ನಡೆಸಿ ಶಿಕ್ಷಣ ವ್ಯವಸ್ಥೆ ಮಣ್ಣುಗೂಡಿಸಿದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.

ಬುಧವಾರ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಕೇಶವನಗರದಲ್ಲಿ ನಿಮಾರ್ಣಗೊಂಡಿರುವ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಗುರುಕುಲದಲ್ಲಿ ಕೇವಲ ಮಂತ್ರಗಳನ್ನು ಮಾತ್ರವಲ್ಲದೇ ಭಾಷೆೆ, ವ್ಯಾಕರಣ, ಸಾಹಿತ್ಯ, ಜೀವನ, ಋಷಿ ಹೀಗೆ ಹಲವು ಮುಖದಲ್ಲಿ ಶಿಕ್ಷಣ ಕೊಡಲಾಗುತ್ತಿತ್ತು. ವಿದ್ವಾಂಸ ಧರ್ಮಪಾಲ್​ ಎಂಬವರ ಅಧ್ಯಯನದ ಪ್ರಕಾರ 18 ನೇ ಶತಮಾನಕ್ಕೂ ಮುನ್ನ ಭಾರತದ ಬಂಗಾಳ ಪ್ರೆಸಿಡೆನ್ಸಿಯಲ್ಲಿ 5 ಲಕ್ಷ, ಮದ್ರಾಸ್​ ಪ್ರೆಸಿಡೆನ್ಸಿಯಲ್ಲಿ 3 ಲಕ್ಷ ಶಾಲೆಗಳಿದ್ದವು. ಸ್ವಾತಂತ್ರ್ಯ ನಂತರ ಸಮಗ್ರ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಶಾಲಾ ಶಿಕ್ಷಣ ಜನಹಿತ ಮಾಡಲಿಲ್ಲ. ಸಂಸತಿ, ಇತಿಹಾಸವನ್ನು ಸರಿಯಾಗಿ ಬೋಧಿಸಿಲ್ಲ ಎಂದರು.

ರಾಷ್ಟ್ರದ ಭವಿಷ್ಯ ಶಾಲೆಯ ತರಗತಿಗಳಲ್ಲಿ ರೂಪಿತವಾಗುತ್ತದೆ. ಭೌತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪೂರ್ಣ ವಿಕಸನ ಶಿಕ್ಷಣದ ಗುರಿಯಾಗಬೇಕು. ಆದರೆ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರು ವಿವಿ ಅಂಗಳದಲ್ಲೇ ದೇಶ ಭಾಗವಾಗಲಿ ಎನ್ನುತ್ತಾರೆ. ಸರ್ಕಾರಿ ಅಧಿಕಾರಿಗಳು ಭಷ್ಟ್ರಾಚಾರಿಗಳಾಗುತ್ತಿದ್ದಾರೆ. ದೇಶಕ್ಕೇನಾದರೂ ಒಳ್ಳೆದು ಮಾಡಬೇಕು ಎಂಬ ಮನೋಸ್ಥಿತಿ ಹೆಚ್ಚಾದರೆ ಮಾತ್ರ ಸಮಾಜ ಉಳಿಯುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೊತ್ಥಾನದಂತ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಇಸ್ರೋದ ನಿಕಟಪೂರ್ವ ಅಧ್ಯಕ್ಷ ಡಾ.ಎಸ್​.ಸೋಮನಾಥ್​ ಮಾತನಾಡಿ, ದೇಶ ಮುಂದಿನ ದಿನಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಲಿದೆ. ಇದಕ್ಕಾಗಿ ಯುವ ಸಮುದಾಯವನ್ನು ಸಿದ್ಧಗೊಳಿಸಬೇಕಿದೆ. ಮುಂದಿನ 25 ವರ್ಷಗಳಲ್ಲಿ ಜನಸಂಖ್ಯಾ ಬೆಳವಣಿಗೆಯಿಂದ ಸಂಪನ್ಮೂಲಗಳ ಕೊರತೆಯಾಗಲಿದ್ದು, ಪರ್ಯಾಯ ಮಾರ್ಗಗಳನ್ನು ಈಗಲೇ ಶೋಧಿಸುವ ಅಗತ್ಯವಿದೆ ಎಂದರು. ಶಾಲಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್​, ಕಾರ್ಯದರ್ಶಿ ಋಷಿರಾಜ್​, ರಾಷ್ಟ್ರೊತ್ಥಾನ ಪರಿಷತ್​ ಅಧ್ಯಕ್ಷ ಎಂ.ಪಿ. ಕುಮಾರ್​, ಪ್ರ.ಕಾರ್ಯದರ್ಶಿ ನಾ.ದಿನೇಶ್​ ಹೆಗ್ಡೆ ಉಪಸ್ಥಿತರಿದ್ದರು.

ರಾಷ್ಟ್ರೊತ್ಥಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್​ ಸ್ವಾಗತಿಸಿದರು. ಗಿರೀಶ್​ ಅಂಪಾರು ವೈಯಕ್ತಿಕ ಗೀತೆ ಹಾಡಿದರು. ಶಾಲಾ ಪ್ರಾಂಶುಪಾಲೆ ಪೂರ್ಣಿಮಾ ವಂದಿಸಿದರು. ನಂದಿನಿ ಮತ್ತು ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರದಿಪ್​ ಶಾಂತಿಮಂತ್ರ ಭೋದಿಸಿದರು.

ಶತ್ರು ದೇಶಕ್ಕೆ ಸ್ವಾಗತಕೋರುವ ಜನಪ್ರತಿನಿಧಿಗಳು ನಮ್ಮ ನಡುವೆ ಇದ್ದಾರೆ. ಇದಕ್ಕೆ ಸಂಸ್ಕಾರಯುತ ಶಿಕ್ಷಣದ ಕೊರತೆಯೇ ಕಾರಣ. ಅನೇಕ ಶಿಕ್ಷಣ ಸಂಸ್ಥೆಗಳು ಅಪ್ಸರೆಯ ರೂಪ ತೊಟ್ಟ ಪೂತನಿಯಂತೆ ಮಕ್ಕಳನ್ನು ಆಕರ್ಷಿಸಿವೆ. ಸಂಸತಿಯ ಬದಲು ವಿಕೃತಿಯನ್ನು ತುಂಬಲಾಗುತ್ತಿದೆ. ಇದರಿಂದ ದೇಶದ ಅಂತಸತ್ವ@ ಕುಗ್ಗಿಹೋಗುತ್ತಿದೆ. ಅದನ್ನು ಸಮರ್ಥವಾಗಿ ಎದುರಿಸುವ ಪಡೆ ಸಿದ್ದವಾಗಬೇಕು. ಮಾತೃಭೂಮಿಯನ್ನು ಪ್ರೀತಿಸುವ ದೊಡ್ಡ ಪಡೆ ನಿಮಾರ್ಣವಾಗಬೇಕು. ಭಾಷೆಗಳು, ಕಲೆ, ಸಂಸ್ಕೃತಿ ಉಳಿದರೆ ಮಾತ್ರ ದೇಶ ರಕ್ಷಣೆ ಸಾಧ್ಯ. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net