ಏ.30 ರಂದು ಚೇರ್ಕಾಡಿ ರಾಷ್ಟ್ರೊತ್ಥಾನ ವಿದ್ಯಾಕೇಂದ್ರ ಉದ್ಘಾಟನೆ

udp-28-rashtrottana
Published on

ಉಡುಪಿ: ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಕೇಶವ ನಗರದಲ್ಲಿ ರಾಷ್ಟ್ರೊತ್ಥಾನ ವಿದ್ಯಾಕೇಂದ್ರ -(ಸಿಬಿಎಸ್​ಇ) ಹಾಗೂ ಪದವಿಪೂರ್ವ ಕಾಲೇಜಿನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ ಏ.30 ರಂದು ಸಾಯಂಕಾಲ 4.30ಕ್ಕೆ ನೆರವೇರಲಿದೆ ಎಂದು ರಾಷ್ಟ್ರೊತ್ಥಾನ ಪರಿಷತ್​ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್​ ಹೆಗ್ಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ದೀಪಪ್ರಜ್ವಲನೆ ನಡೆಸಲಿದ್ದು, ರಾ.ಸ್ವ.ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಇಸ್ರೋದ ನಿಕಟಪೂರ್ವ ಅಧ್ಯಕ್ಷ ಡಾ. ಎಸ್​. ಸೋಮನಾಥ್​ ಉಪಸ್ಥಿತರಿರುವರು ಎಂದರು.

ಧಾರ್ಮಿಕ ಕಾರ್ಯಕ್ರಮ

ಏ.29 ರಂದು ಸಾಯಂಕಾಲ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಟ್ಟಡಗಳ ವಾಸ್ತುಪೂಜೆ ಮತ್ತು ಏ.30 ರಂದು ಬೆಳಗ್ಗೆ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಟ್ಟಡಗಳ ಗೃಹಪ್ರವೇಶ ಸಹಿತ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವಿದ್ಯಾಕೇಂದ್ರದ ವಿಶೇಷತೆ

ಭಾರತೀಯ ಸಂಸತಿಯ ಜೊತೆಗೆ ಅಧುನಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆರಂಭಗೊಂಡ ರಾಷ್ಟ್ರೊತ್ಥಾನ ಶಿಕ್ಷಣ ಸಂಸ್ಥೆ 60 ವರ್ಷ ಪೂರೈಸಿದೆ. ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ 17ನೇ ಸಿ.ಬಿ.ಎಸ್​.ಇ. ಶಾಲೆ ಲೋಕಾರ್ಪಣೆಗೆ ಸಿದ್ಧವಾಗಿದೆ. ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿವರೆಗೆ ಒಟ್ಟು 18,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಚೇರ್ಕಾಡಿ ಕೇಶವ ನಗರದ 20 ಎಕರೆ ವಿಶಾಲ ಕ್ಯಾಂಪಸ್ನಲ್ಲಿ 1 ಸಾವಿರ ಮಕ್ಕಳು ಪ್ರವೇಶಾತಿ ಪಡೆಯಬಹುದಾಗಿದ್ದು, ಈಗಾಗಲೇ 800ಕ್ಕೂ ಹೆಚ್ಚು ಮಕ್ಕಳು ನೋಂದಣಿ ಮಾಡಿದ್ದಾರೆ. 250 ಮಕ್ಕಳಿಗೆ ಹಾಸ್ಟೆಲ್​ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯಾಂಪಸ್​ನಲ್ಲಿ ಗ್ರೀನ್​ ಎನರ್ಜಿಗೆ ಒತ್ತು ನೀಡಲಾಗಿದ್ದು, ಸೋಲಾರ್​ ದೀಪಗಳನ್ನು ಅಳವಡಿಸಲಾಗಿದೆ. ಮೇ ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಚಲನಾ ಸಮಿತಿ ಅಧ್ಯಕ್ಷ ಸಾಧು ಸಾಲಿಯನ್​, ಕಾರ್ಯದರ್ಶಿ ರಿಷಿರಾಜ್​, ಪಿಯು ಕಾಲೇಜಿನ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್​, ವಿದ್ಯಾಕೇಂದ್ರದ ಪ್ರಾಂಶುಪಾಲೆ ಪೂರ್ಣಿಮಾ, ಪ್ರಮುಖರಾದ ವಸಂತ್​ ಕುಮಾರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net