

ಮಳವಳ್ಳಿ: ನಂದಿನಿ ಕ್ಷೀರ ಬ್ಯಾಂಕ್ ಸ್ಥಾಪನೆ ಮಾಡಲು ಕಾಲ ಕೂಡಿ ಬಂದಿದ್ದು, ಶೀಘ್ರ ವಾಗಿ ತಾಲೂಕಿನ ಹಾಲು ಉತ್ಪಾದಕರಿಗೆ ಶುಭ ಸುದ್ದಿ ನೀಡಲಾಗುವುದು ಎಂದು ಕೆಎಂಎಫ್ ನಿರ್ದೇಶಕ ವಿ.ಎಂ.ವಿಶ್ವನಾಥ್ ತಿಳಿಸಿದರು.
ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಮಂಗಳವಾರ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು, ಸವಲತ್ತುಗಳನ್ನು ಪಡೆದವರು ದಯಮಾಡಿ ಉತ್ತಮವಾದ ರಾಸುಗಳನ್ನು ಖರೀದಿಸುವ ಮೂಲಕ ಅವುಗಳಿಗೆ ವಿಮಾ ಪಾಲಿಸಿಗಳನ್ನು ಮಾಡಿಸುವಂತೆ ಮನವಿ ಮಾಡಿದರು. ನಾನೂ ಒಬ್ಬ ರೈತನ ಮಗನಾಗಿದ್ದು, ಅನ್ನದಾತರ ಜೀವನ ಎಷ್ಟೊಂದು ದುಸ್ತರವಾಗಿರುತ್ತದೆ ಎಂಬುದನ್ನು ಅರಿತಿದ್ದೇನೆ. ಆದ್ದರಿಂದ ಕೆಎಂಎಫ್‌ನಲ್ಲಿ ನನಗೆ ಸಿಕ್ಕಿರುವ ಅಧಿಕಾರವನ್ನು ಕಿಂಚಿತ್ತೂ ವ್ಯರ್ಥವಾಗದಂತೆ ಬಳಸಿಕೊಂಡು ಹೈನೋದ್ಯಮದಲ್ಲಿ ರೈತರ ಜೀವನಮಟ್ಟ ಸುಧಾರಣೆಗೆ ಆಗಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿಸುತ್ತಿದ್ದೇನೆ ಎಂದರು. ದಯವಿಟ್ಟು ಉತ್ಪಾದಕರು ಗುಣಮಟ್ಟದ ಹಾಲನ್ನು ಡೇರಿಗಳಿಗೆ ಪೂರೈಸುವ ಮೂಲಕ ಒಕ್ಕೂಟದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮನ್‌ಮುಲ್ ಉಪವ್ಯವಸ್ಥಾಪಕ ಭರತ್ ರಾಜು, ತಾಲೂಕು ಮುಖ್ಯಸ್ಥ ಸಿ.ಎನ್. ಮಧು ಶಂಕರ್, ಪಶುವೈದ್ಯ ಸಮಾಲೋಚಕ ಡಾ.ದೇವೇಂದ್ರ, ವಿಸ್ತರಣಾಧಿಕಾರಿ ಮಧು ಬಿ.ಸಿ., ಡಾ.ತೇಜಶ್ವಿನಿ, ಸ್ಟೆಪ್ ಸೊಸೈಟಿ ಮುಖ್ಯಸ್ಥೆ ಸುಕನ್ಯಾ ಇತರರಿದ್ದರು.