ಚನ್ನರಾಯಪಟ್ಟಣ ಜಿಲ್ಲಾ ಕೇಂದ್ರ ಪ್ರಸ್ತಾಪ ಮುನ್ನೆಲೆಗೆ

Channarayapattana Map
Published on

ತುಳಸಿಕುಮಾರ್ ಆರ್. ಬೆಂಗಳೂರು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕನ್ನು ಹೊಸ ಜಿಲ್ಲಾ ಕೇಂದ್ರವಾಗಿ ರಚಿಸಬೇಕೆಂಬ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಹಾಲಿ ಉಪ ವಿಭಾಗವಾಗಿ ಗುರುತಿಸಿಕೊಂಡಿರುವ ಚನ್ನರಾಯಪಟ್ಟಣ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. ಇದಕ್ಕೆ ಸ್ಪಷ್ಟವಾದ ದಿಕ್ಸೂಚಿ ನೀಡಲು ಚನ್ನರಾಯಪಟ್ಟಣಕ್ಕೆ ಹೊಂದಿಕೊಂಡಿರುವ ತಾಲೂಕುಗಳನ್ನು ಸೇರಿಸಿಕೊಂಡು ನೂತನ ಜಿಲ್ಲೆ ಮಾಡುವುದು ಸೂಕ್ತ ಎಂಬ ಸಲಹೆಗೆ ಕ್ರಮೇಣ ಬೆಂಬಲ ವ್ಯಕ್ತವಾಗುತ್ತಿದೆ.


ಚನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆಯ ಏಕೈಕ ಉಪ ವಿಭಾಗವಾಗಿ ಕಾರ್ಯಾಚರಿಸುತ್ತಿದೆ. ಇಲ್ಲೀಗ ಆಡಳಿತಾತ್ಮಕ ಕಚೇರಿಗಳು, ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಜನರಿಗೆ ಸೇವೆ ನೀಡುತ್ತಿವೆ. ಇವುಗಳ ಜತೆಗೆ ಶಿಕ್ಷಣ, ಆರೋಗ್ಯ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು ಹೆಚ್ಚಿವೆ. ಕೃಷಿ ಸಂಬಂಧಿತ ಚಟುವಟಿಕೆಯಿಂದಾಗಿ ರೈತರು ಕೂಡ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಸ್ತೆ, ರೈಲ್ವೆ ಮೂಲಸೌಕರ್ಯವೂ ಜನರಿಗೆ ಅನುಕೂಲ ಕಲ್ಪಿಸಿದೆ. ಇತರ ಕ್ಷೇತ್ರಗಳಲ್ಲೂ ಬೆಳವಣಿಗೆಗೆ ವಿುಲಾವಕಾಶಗಳಿವೆ. ಇದನ್ನು ಗಮನಿಸಿಯೇ 2001ರಲ್ಲಿ ಪ್ರೊ. ಟಿ.ಗೋವಿಂದಯ್ಯ ನೇತೃತ್ವದಲ್ಲಿ ಕೈಗೊಂಡಿದ್ದ ಅಧ್ಯಯನದ ಪ್ರಕಾರ ಚನ್ನರಾಯಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಶಿಾರಸು ಮಾಡಲಾಗಿತ್ತು. ನಂತರದಲ್ಲಿ ಬಂದಂತ ಜಿಲ್ಲೆ ಹಾಗೂ ತಾಲುಕು ಪುನರ್ವಿಂಗಡಣಾ ಸಮಿತಿಗಳು ಚನ್ನರಾಯಪಟ್ಟಣ ಅಥವಾ ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸಲು ಶಿಾರಸು ಮಾಡಿತ್ತಾದರೂ, ಸರ್ಕಾರದ ಅನುಮೋದನೆ ದೊರೆಯದ ಕಾರಣ ಅನುಷ್ಠಾನಕ್ಕೆ ಬರಲಿಲ್ಲ.


ಕಳೆದ ವರ್ಷ ಬಳ್ಳಾರಿ ಜಿಲ್ಲೆಯಿಂದ ವಿಜಯನಗರವನ್ನು ಪ್ರತ್ಯೇಕಿಸಿ ಹೊಸ ಜಿಲ್ಲೆಯನ್ನಾಗಿ ರಚಿಸಲಾಯಿತು. ಇತ್ತೀಚಿಗಷ್ಟೇ ಉತ್ತರಕನ್ನಡ ಜಿಲ್ಲೆಯ ಶಿರಸಿಯನ್ನು ಹೊಸ ಜಿಲ್ಲೆಯನ್ನಾಗಿ ರಚಿಸುವ ಭರವಸೆ ದೊರೆತಿದೆ. ಹೀಗಾಗಿ ಚನ್ನರಾಯಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ಮಂಡ್ಯ ಜಿಲ್ಲೆಯ ನಾಗಮಂಗಲ, ಕೃಷ್ಣರಾಜಪೇಟೆ ತಾಲೂಕು ಹಾಗೂ ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ ತಾಲೂಕುಗಳನ್ನು ಸೇರಿಸಿಕೊಂಡು ಹೊಸ ಜಿಲ್ಲೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.


ಹೊಸ ಜಿಲ್ಲೆಯಿಂದ ಅಭಿವೃದ್ಧಿಗೆ ವೇಗ: ಕರ್ನಾಟಕದಲ್ಲಿ ಪ್ರಸ್ತುತ 31 ಜಿಲ್ಲೆಗಳು ಅಸ್ತಿತ್ವದಲ್ಲಿವೆ. ಇನ್ನೂ ನಾಲ್ಕೈದು ಜಿಲ್ಲೆಗಳನ್ನು ರಚಿಸಬೇಕೆಂಬ ಬೇಡಿಕೆ ವರ್ಷಗಳಿಂದ ಕೇಳಿಬರುತ್ತಿದೆ. ಅದರಲ್ಲೂ ದೊಡ್ಡ ಜಿಲ್ಲೆಗಳಾದ ತುಮಕೂರು, ಉತ್ತರಕನ್ನಡ ಹಾಗೂ ಬೆಳಗಾವಿಯನ್ನು ವಿಭಾಗಿಸಿ ತಲಾ ಎರಡೆರಡು ಜಿಲ್ಲೆ ಮಾಡುವ ಪ್ರಸ್ತಾಪ ಇದೆಯಾದರೂ ಅದನ್ನು ಸರ್ಕಾರ ಇನ್ನೂ ಒಪ್ಪಿಲ್ಲ. ಮುಖ್ಯವಾಗಿ ರಾಜಕೀಯ ಕಾರಣಕ್ಕೆ ಜಿಲ್ಲೆ ರಚಿಸದೆ ಅಭಿವೃದ್ಧಿಗೋಸ್ಕರ ಜಿಲ್ಲೆ ಮಾಡಿದ್ದಲ್ಲಿ ಜನರಿಗೆ ಹೆಚ್ಚು ಅನುಕೂಲಗಳಿರುತ್ತವೆ ಎಂಬುದು ಆಡಳಿತ ತಜ್ಞರ ಅಭಿಪ್ರಾಯವಾಗಿದೆ. ಇದೇ ನೆಲೆಗಟ್ಟಿನಲ್ಲಿ ಚನ್ನರಾಯಪ್ಟಣವನ್ನು ಜಿಲ್ಲಾ ಕೇಂದ್ರ ಮಾಡಿದ್ದಲ್ಲಿ ಹೊಸ ಜಿಲ್ಲೆಯನ್ನು ಒಳಗೊಳ್ಳುವ ಪ್ರದೇಶಗಳಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂಬುದು ಆ ಭಾಗದ ಜನರ ಬಯಕೆಯೂ ಆಗಿದೆ.


ಹಾಸನ ಜಿಲ್ಲೆಯ ಸುತ್ತಲಿರುವ ತಾಲುಕುಗಳನ್ನು ಸೇರಿಸಿಕೊಂಡು ಹೊಸ ಜಿಲ್ಲೆ ರಚಿಸಿದರೆ ಭವಿಷ್ಯದಲ್ಲಿ ಅಭಿವೃದ್ಧಿಗೆ ಪೂರಕವಾಗಲಿದೆ. ಉದ್ಯೋಗಾವಕಾಶ ಸೃಷ್ಟಿ, ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವೇಗ, ಆಡಳಿತಾತ್ಮಕ ನಿರ್ಧಾರಗಳಲ್ಲಿ ತ್ವರಿತ ನಿರ್ಧಾರ ತಗೆದುಕೊಳ್ಳುವುದು ಸುಲಭವಾಗಲಿದೆ. ನೀರಾವರಿ, ಕೈಗಾರಿಕಾಭಿವೃದ್ಧಿ, ನಗರಾಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಜಿಲ್ಲಾ ಪುನರ್ವಿಂಗಡಣೆಗೆ ಒಂದು ಅರ್ಥ ಬರುತ್ತದೆ ಎನ್ನುತ್ತಾರೆ ಸ್ಥಳೀಯ ಬಿಜೆಪಿ ಮುಖಂಡ ಎ.ಎಸ್.ಕೆಂಪೇಗೌಡ.


ಮೂಲ ಜಿಲ್ಲೆಗಳ ಮೇಲೆ ಪರಿಣಾಮ ಇಲ್ಲ: ಉದ್ದೇಶಿತ ಚನ್ನರಾಯಪಟ್ಟಣ ಜಿಲ್ಲೆ ಐದು ತಾಲೂಕುಗಳನ್ನು ಒಳಗೊಂಡಿರುತ್ತದೆ. ಈ ತಾಲೂಕುಗಳಿಗೆ ಸೇರಿದ ಒಟ್ಟು 25 ಹೋಬಳಿಗಳು, 1544 ಗ್ರಾಮಗಳು ಸೇರಿ 4.54 ಲಕ್ಷ ಹೇಕ್ಟೇರ್ ಪ್ರದೇಶದ ಭೌಗೋಳಿಕತೆ ಇರಲಿದ್ದು, ಅಂದಾಜು 15 ಲಕ್ಷ ಜನಸಂಖ್ಯೆ ಒಳ್ಳಗೊಳ್ಳಬಹುದು. ಮೂರೂ ಜಿಲ್ಲೆಗಳಿಂದ ಐದು ತಾಲೂಕುಗಳನ್ನು ಕೈಬಿಟ್ಟರೂ ಮೂಲ ಜಿಲ್ಲೆಗಳ ವಿಸ್ತೀರ್ಣ, ಭೌಗೋಳಿಕ ಪ್ರದೇಶ, ಜನಸಂಖ್ಯೆಯಲ್ಲಿ ಹೆಚ್ಚು ಬದಲಾವಣೆಯಾಗದೆ ಮಧ್ಯಮ ಪ್ರಮಾಣದ ಜಿಲ್ಲೆಗಳಾಗಿಯೇ ಮುಂದುವರಿಯಲಿದೆ ಎಂಬ ವಾದವನ್ನು ಮುಂದಿಡಲಾಗಿದೆ.


ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿಸ್ತೀಣ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಇನ್ನಷ್ಟು ಜಿಲ್ಲೆಗಳು ರಚನೆಯಾಗಬೇಕಿದೆ. ಈ ನಿರ್ಧಾರವನ್ನು ಕೈಗೊಳ್ಳುವಾಗ ಕೇವಲ ಅಭಿವೃದ್ಧಿ ವಿಚಾರಕ್ಕೆ ಆದ್ಯತೆ ನೀಡಿದ್ದಲ್ಲಿ ನೂತನ ಜಿಲ್ಲೆ ಹಾಗೂ ಅಲ್ಲಿನ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಚನ್ನರಾಯಪಟ್ಟಣವನ್ನು ಜಿಲ್ಲಾ ಕೇಂದ್ರ ರಚಿಸುವ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು.

| ಡಾ. ಟಿ. ಗೋವಿಂದಯ್ಯ ನೀರಾವರಿ ಹಾಗೂ ಆಡಳಿತ ಕ್ಷೇತ್ರದ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net