

ಮೈಸೂರು: ವೀರ ವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಅವರು ಎಲ್ಲ ಹೆಣ್ಣು ಮಕ್ಕಳಿಗೆ ಸ್ಫೂರ್ತಿದಾಯಕ ಎಂದು ಮೇಯರ್ ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಸಮಿತಿ ಹಾಗೂ ಒನಕೆ ಓಬವ್ವ ಜಯಂತ್ಯುತ್ಸವ ಸಮಿತಿಯ ಆಶ್ರಯದಲ್ಲಿ ನಗರದ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಭಕ್ತಿ ಮತ್ತು ಧೈರ್ಯವನ್ನು ಎಲ್ಲರಿಗೂ ಪರಿಚಯಿಸಲು ಇಂತಹ ಮಹಾಮಣಿಯರ ಜಯಂತಿಯನ್ನು ಆಚರಿಸುತ್ತೇವೆ. ಚಿತ್ರದುರ್ಗದ ಮದಕರಿ ನಾಯಕರ ಕೋಟೆಯನ್ನು ಹೈದರಾಲಿ ಸೈನಿಕರು ಮುತ್ತಿಗೆ ಹಾಕುವ ವೇಳೆ ನಡೆದ ಘಟನೆ ಸ್ಮರಣೀಯ. ಆ ವೇಳೆ ಒನಕೆ ಓಬವ್ವ ಆ ಸೈನಿಕರನ್ನು ಸದೆ ಬಡೆದು ಕೋಟೆಯನ್ನು ಕಾಪಾಡಿದರು. ಓಬವ್ವ ಸ್ವಾಮಿನಿಷ್ಠೆ, ಧೈರ್ಯ, ತ್ಯಾಗದ ಸಂಗಮ ಎಂದು ಹೇಳಿದರು.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 33 ವರ್ಷಗಳ ಮುನ್ನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ವೀರ ಮಹಿಳೆ. ಭಾರತದ ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ಹೋರಾಡಿ ವೀರಮರಣ ಹೊಂದುವ ಮೂಲಕ ಇತಿಹಾಸದಲ್ಲಿ ಅವಿಸ್ಮರಣೀಯವಾಗಿದ್ದಾರೆ. ಯುವ ಜನಾಂಗ ರಾಣಿ ಚೆನ್ನಮ್ಮರಂತೆ ದೇಶಪ್ರೇಮ ಬೆಳೆಸಿಕೊಂಡು ಶೌರ್ಯವಂತರಾಗಬೇಕೆಂದು ಕರೆ ನೀಡಿದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಪ್ರೀತಿ ಶುಭಚಂದ್ರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಸುದರ್ಶನ್ ಇದ್ದರು.