

ಮಡಿಕೇರಿ:
ಪ್ರವಾಸೋದ್ಯಮ, ಸೇನಾ ನೇಮಕಾತಿ, ಕೃಷಿ ಸಂಬAಧಿತ ಉದ್ಯೋಗಗಳೂ ಸೇರಿದಂತೆ ವಿದ್ಯಾವಂತರಿಗೆ ಸಾಕಷ್ಟು ಉದ್ಯೋಗವಕಾಶಗಳು ಸಮಾಜದಲ್ಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ. ಜಿ. ಕುಶಾಲಪ್ಪ ಕರೆ ನೀಡಿದ್ದಾರೆ. ಮಾದಾಪುರ ಬಳಿಯ ಗರಗಂದೂರಿನ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ವಿದ್ಯಾವಂತರಿಗೆ ಕೊಡಗಿನಲ್ಲಿಯೇ ಸಾಕಷ್ಟು ಉದ್ಯೋಗ ದೊರಕುತ್ತದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ವೃತ್ತಿಯ ಅವಕಾಶಗಳನ್ನು ಕೊಡಗಿನ ಯುವಪೀಳಿಗೆ ಸಮರ್ಥವಾಗಿ ಬಳಸಿಕೊಳ್ಳಬೇಕು. ಕೊಡಗಿನ ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗಗಳನ್ನು ಕೊಡಗಿನವರಿಗೆ ನೀಡುವಂತಾಗಬೇಕು. ಭಾರತೀಯ ಸೇನೆಯಲ್ಲಿ ಅಗ್ನವೀರ್‌ನಂಥ ನೇಮಕಾತಿ ಯೋಜನೆಯನ್ನೂ ಯುವಪೀಳಿಗೆ ಬಳಸಿಕೊಳ್ಳಬೇಕು. ಕೃಷಿ ರಂಗದಲ್ಲಿಯೂ ವಿಪುಲ ಅವಕಾಶಗಳಿದ್ದು, ಕೃಷಿ ವಿಷಯದಲ್ಲಿ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಉದ್ಯೋಗ ಸುಲಭ ಸಾಧ್ಯವಾಗಿದೆ.
ಜೀವನದಲ್ಲಿ ಉದ್ದೇಶಿತ ಗುರಿಯತ್ತ ಸಾಗುವ ಕನಸಿದ್ದರೆ ಸಾಕು, ಇಂಥ ಕನಸೇ ಯುವಪೀಳಿಗೆಯನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದೇವೆ ಎಂಬ ಕೀಳರಿಮೆ ಯಾರಲ್ಲೂ ಇರಬಾರದು. ಸಾಧಕರಿಗೆ ಮಾಧ್ಯಮದ ಹಂಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ 6 ದಶಕಗಳಿಂದ ವಿದ್ಯಾಸೇವೆ ನೀಡುತ್ತಿರುವ ಶ್ರೀಮತಿ ಡಿ. ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಸಾಧನೆ ನಿಜಕ್ಕೂ ದಾಖಲಾರ್ಹ ಎಂದರು.
ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತೀರ ರೋಷನ್ ಅಪ್ಪಚ್ಚು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿಯೂ ದುಶ್ಚಟಗಳಿಗೆ ಬಲಿಯಾಗಬೇಡಿ. ಒಮ್ಮೆ ದುಶ್ಚಟಕ್ಕೆ ಈಡಾದರೆ ಮತ್ತೆ ಅದರಿಂದ ಹೊರಬರಲಾಗದೇ ಜೀವನದಲ್ಲಿ ಉದ್ದೇಶಿತ ಸಾಧನೆಯ ಗುರಿಯತ್ತ ಸಾಗುವುದು ಕಷ್ಟಸಾಧ್ಯವಾಗಲಿದೆ. ದೇಶ ಸೇವೆಯತ್ತಲೂ ಮನಸ್ಸು ಮಾಡಬೇಕು. ಉತ್ತಮ ನಾಗರಿಕರಾಗಿ ಬಾಳಬೇಕು. ಜೀವನದಲ್ಲಿ ಧ್ಯೇಯ ಇರಿಸಿಕೊಂಡು, ಅದನ್ನು ಸಾಧಿಸಲು ಶ್ರಮಿಸಬೇಕು. ಯಾವುದೇ ಗುರಿಯನ್ನಾದರೂ ಒಮ್ಮೆಗೆ ಸಾಧಿಸುವುದು ಕಷ್ಟಸಾಧ್ಯ. ಹಂತಹAತವಾಗಿ ಗುರಿಯತ್ತ ಮುಂದಡಿ ಇರಿಸಿ ಎಂದು ಹೇಳಿದರು.
ರೋಟರಿ ಜಿಲ್ಲೆ 3181 ನ ಮಾಜಿ ಗವರ್ನರ್ ಹೆಚ್.ಆರ್. ಕೇಶವ್ ಮಾತನಾಡಿ, ಮಕ್ಕಳಿಗೆ ಕಷ್ಟಗಳ ಅನುಭವ ಆಗದೇ ಹೋದರೆ, ಅವರಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮುವುದಿಲ್ಲ. ನೀವು ಶಿಕ್ಷಣ ಪಡೆದ ಶಾಲೆಗೆ ಕೊಡುಗೆ ಕೊಡುವ ಮೂಲಕ ನಿಮ್ಮನ್ನು ಸಾಧಕರನ್ನಾಗಿ ಮಾಡಿದ ಸಂಸ್ಥೆಗೆ ನಿಮ್ಮ ಕೊಡುಗೆ ನೀಡಬೇಕು ಎಂದರು.
ಮಡಿಕೇರಿ ನಗರಸಭೆಯ ಮಾಜಿ ಪೌರಾಯುಕ್ತೆ ಬಿ.ಬಿ. ಪುಪ್ಪಾವತಿ ವಜ್ರದೀವಿಗೆ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಪ್ರಾಮಾಣಿಕತೆ ಕಡಮೆಯಾದಾಗಲೆಲ್ಲಾ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಜೀವನದಲ್ಲಿ ಪ್ರಾಮಾಣಿಕರಾಗಿ ಬದುಕಿ ಎಂದು ಹೇಳಿದರಲ್ಲದೆ ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗಿನ ವಿದ್ಯಾರ್ಥಿಗಳಿಗೆ ಜೀವನಕ್ಕಾಗಿನ ಉದ್ಯೋಗಾವಕಾಶಗಳು ಅತ್ಯಧಿಕವಾಗಿದೆ. ಮೊಬೈಲ್ ಎಂಬ ಉಪಕರಣ ವಿದ್ಯಾರ್ಥಿಗಳ ಪಾಲಿಗೆ ಮಾಹಿತಿಯ ಕಣಜವಾಗಿದೆ ಎಂದರು.
ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ಇದೇ ಶೈಕ್ಷಣಿಕ ಸಾಲಿನಿಂದ ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುತ್ತಿರುವುದಾಗಿ ಪ್ರಕಟಿಸಿದರು.
ಕಾಲೇಜಿನ ಪ್ರಾಂಶುಪಾಲ ಚೆಯ್ಯಂಡ ಸಿ. ಮಂದಪ್ಪ, ಪ್ರೌಡಶಾಲೆಯ ಮುಖ್ಯ ಶಿಕ್ಷಕಿ ಕೆ.ಯು. ರೀಟಾ, ಉಪನ್ಯಾಸಕಿ ಪ್ರಮೀಳಾ ವೆಂಕಟೇಶ್, ಆಡಳಿತ ಮಂಡಳಿ ಪೋಷಕ ಎಂ.ಜಿ. ಬೋಪಣ್ಣ, ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಇದ್ದರು. ವಿದ್ಯಾರ್ಥಿಗಳಿಂದ ಪಥಸಂಚಲನ, ಸಾಮೂಹಿಕ ಅಂಗಸಾಧನೆ ಗಮನ ಸೆಳೆದವು.
ಸಂಸ್ಥೆಯ ನಿವೃತ್ತ ಭೋದಕ ಎಂ.ಎಸ್. ಸುಬ್ರಹ್ಮಣ್ಯ, ಪಿ. ಸೋಮಯ್ಯ, ಸೋಮಶೇಖರ್, ಬಿ. ಸಿ. ಶಂಕರಯ್ಯ, ಭೋದಕೇತರ ವರ್ಗದ ಸಿಬ್ಬಂದಿ ಎಸ್.ಸಿ. ಮಾಲತಿ, ಸಿ.ಆರ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಅದವ್ಯಳನ್ನು ಗೌರವಿಸಲಾಯಿತು.