

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ಬಸವನಹಳ್ಳಿಯಲ್ಲಿ ಹುಲಿ ಸಂಚಾರ ಆತಂಕ ಮೂಡಿಸಿದೆ. ದೇವಜನ ಪೂಣಚ್ಚ, ಅಪ್ಪಯ್ಯ ಎಂಬುವವರ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿ ಸಂಚಾರ ವಿಷಯ ಬಹಿರಂಗವಾಗುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ತಿತಿಮತಿ ವಲಯದ ದೇವಮಚ್ಚಿ ಅರಣ್ಯದಿಂದ ಈ ಹುಲಿ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹುಲಿ ಹೆಜ್ಜೆ ಗುರುತು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಬಾಡಗ, ಬಾಣಂಗಾಲ, ಘಟ್ಟದಳ್ಳ ಭಾಗದಲ್ಲೂ ಹುಲಿ ಸಂಚಾರವಿದ್ದು, ಬೆಳೆಗಾರರು ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿದೆ.
ಕಾಡಾನೆ ಉಪಟಳದಿಂದ ಸಾಕಷ್ಟು ತೊಂದರೆ ಅನುಭವಿಸಿರುವ ಇಲ್ಲಿನ ಜನ ಇದೀಗ ಹುಲಿ ಭಯದಿಂದ ಬೇಸತ್ತಿದ್ದಾರೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಮಾತ್ರ ಬೋನಿಗೆ ಬೀಳುತ್ತಿಲ್ಲ. ಅರಣ್ಯ ಸಿಬ್ಬಂದಿ ಕಣ್ತಪ್ಪಿಸಿ ಓಡಾಡುತ್ತಿರುವ ಹುಲಿಯಿಂದ ಅನಾಹುತ ಸಂಭವಿಸುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.