ಚೇಂದಂಡ ತಂಡಕ್ಕೆ ಚಾಂಪಿಯನ್ ಪಟ್ಟ

ಚಾಂಪಿಯನ್ ಚೇಂದಂಡ ತಂಡ
ಚಾಂಪಿಯನ್ ಚೇಂದಂಡ ತಂಡ
Published on

ಗೋಣಿಕೊಪ್ಪಲು: ವಿರಾಜಪೇಟೆ ತಾಲೂಕಿನ ವಿ.ಬಾಡಗದ ಹೈ ಫ್ಲೈಯರ್ಸ್ ಸಂಸ್ಥೆ ವತಿಯಿಂದ ಇಲ್ಲಿನ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಹೈ ಫ್ಲೈಯರ್ಸ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಚೇಂದಂಡ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ನಡುವೆ ನಡೆದ 3ನೇ ವರ್ಷದ ಪಂದ್ಯದಲ್ಲಿ ಮುರುವಂಡ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಚಂದುರ ತಂಡ ತೃತೀಯ ಹಾಗೂ ತೀತಮಾಡ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಫೈನಲ್ ಪಂದ್ಯವನ್ನು ಅತಿಥಿಗಳು ಮೈದಾನಕ್ಕೆ ಬಂದು ಆಟಗಾರರಿಗೆ ಶುಭಕೋರುವ ಮೂಲಕ ಉದ್ಘಾಟಿಸಿದರು. ಫೈನಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿರಾಜಪೇಟೆ ವೃತ್ತ ನಿರಿಕ್ಷಕ ಅನೂಪ್ ಮಾದಪ್ಪ, ಯುವ ಸಮೂಹ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಕ್ರೀಡೆಗಳಿಂದ ವಿಮುಖರಾಗುತ್ತಿದ್ದು, ಮಕ್ಕಳು ದಾರಿತಪ್ಪದಂತೆ ಪಾಲಕರು ಎಚ್ಚರ ವಹಿಸಬೇಕೆಂದು ಕಿವಿಮಾತು ಹೇಳಿದರು.

ಕೊಡಗು ಹೋಟೆಲ್ಸ್, ರೆಸ್ಟೋರೆಂಟ್ಸ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಕೊಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಯುವ ಜನಾಂಗ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಹೈ ಫ್ಲೈಯರ್ಸ್ ಸಂಸ್ಥೆ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಮಾತನಾಡಿದರು. ವಿ.ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಸಿ.ಗೀತಾಂಜಲಿ, ಸಹ ಶಿಕ್ಷಕಿ ಮಳವಂಡ ಶೈಲ ಕಾವೇರಮ್ಮ ಹಾಗೂ ಹೆಸರಾಂತ ಅಥ್ಲೀಟ್ ಮುರುವಂಡ ಸ್ಪೂರ್ತಿ ಸೀತಮ್ಮ ಅವರನ್ನು ಸನ್ಮಾನಿಸಲಾಯಿತು.

ಅಂತಾರಾಷ್ಟ್ರಿಯ ಮಾಜಿ ಆಟಗಾರ ಪೈಕೆರ ಕಾಳಯ್ಯ, ವಿ.ಬಾಡಗ ಮೂಲದ ಉದ್ಯಮಿ ಫೈರ್ ಪ್ರೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಬುಡುಮಾಡ ಎಸ್.ನರೇಂದ್ರ, ಉದ್ಯಮಿ ಮುಂಡಂಡ ವರುಣ್ ಗಣಪತಿ, ಸ್ಥಳೀಯ ಕಾಫಿ ಬೆಳೆಗಾರ ಕಿಶೋರ್ ಕಾವೇರಪ್ಪ, ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ಕುಪ್ಪಂಡ ದಿಲನ್‌ಬೋಪಣ್ಣ, ವಿ. ಬಾಡಗ ಸರ್ಕಾರಿ ಮಾದರಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಂಜಿತಂಡ ಗಿಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಚೇಮೀರ ಪ್ರಭು ಪೂವಯ್ಯ, ಅಮ್ಮುಣಿಚಂಡ ರೋಹಿತ್, ಕಂಜಿತಂಡ ವಿಕ್ರಂ, ಕೊಂಗಂಡ ಕಾಶಿ ಕಾರ್ಯಪ್ಪ ಮತ್ತೀತರರು ಉಪಸ್ಥಿತರಿದ್ದರು.

ಅತ್ಯಂತ ರೋಷಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ ಮರುವಂಡ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದ ಬಿಡುವಿನ ಅವಧಿಯಲ್ಲಿ ಪೊವ್ವದಿ ಮಹಿಳಾ ಸಮಾಜದ ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಆಯೋಜಿಲಾಗಿತ್ತು. ವಿ.ಬಾಡಗ ಹೈ ಫ್ಲೈಯರ್ಸ್ ಸಂಸ್ಥೆ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net