

ಮಡಿಕೇರಿ:
ಈ ಬಾರಿಯ ಕೊಡವ ಕೌಟುಂಬಿಕ ಹಾಕಿ ಹಬ್ಬದ ಸಾರಥ್ಯ ವಹಿಸಿರುವ ಚೇನಂಡ ಕುಟುಂಬವು ಹಾಕಿ ಹಬ್ಬದ ಜತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ ಎಂದು ಚೇನಂಡ ಹಾಕಿ ಹಬ್ಬ ಸಮಿತಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ ತಿಳಿಸಿದ್ದಾರೆ.
ಪಾಂಡAಡ ಕುಟ್ಟಪ್ಪ ಅವರ ಕನಸಿನ ಕೂಸಾಗಿ 1997ರಲ್ಲಿ ಕರಡ ಗ್ರಾಮದಲ್ಲಿ ಆರಂಭವಾದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಇಂದು ಬೃಹದಾಕಾರವಾಗಿ ಬೆಳೆದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲೂ ಸ್ಥಾನ ಗಳಿಸಿದೆ. ಈ ಬಾರಿಯ ಹಾಕಿ ಹಬ್ಬ ಕೊಡವ ಹಾಕಿ ಅಕಾಡೆಮಿ ಸಾರಥ್ಯದಲ್ಲಿ 2026 ಏ.5ರಿಂದ ಮೇ 2ರ ತನಕ ನಾಪೋಕ್ಲುವಿನ ಜ. ಕೆ.ಎಸ್. ಹಾಕಿ ಮೈದಾನದಲ್ಲಿ ನಡೆಯಲಿದೆ. ಇದಕ್ಕಾಗಿ 4 ಮೈದಾನಗಳನ್ನು ಈಗಾಗಲೇ ಕಾದಿರಿಸಲಾಗಿದೆ. ಹಾಕಿ ಹಬ್ಬದ ಅಂಗವಾಗಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರತಿ ಗೋಲ್‌ಗೆ ಒಂದು ಗಿಡ ನೆಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಕಿ ಹಬ್ಬದ ಹಿನ್ನೆಲೆಯಲ್ಲಿ 2,500 ಗಿಡಗಳನ್ನು ನೆಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಮೊದಲ ಹಂತದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಈ ತಿಂಗಳಾAತ್ಯಕ್ಕೆ ಕೋಕೇರಿ ಗ್ರಾಮದ ನೀಲಿಯಾಟ್ ಮಂದ್‌ನಲ್ಲಿ ಚಾಲನೆ ನೀಡಲಿದ್ದಾರೆ.
ದ್ವಿತೀಯ ಹಂತದಲ್ಲಿ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಸೆ.8ರಂದು ಕರಡ ಗ್ರಾಮದ ಮಲೆತಿರಿಕೆ ದೇವಸ್ಥಾನದಲ್ಲಿ ಚಾಲನೆ ಕೊಡಲಿದ್ದಾರೆ. ಮೂರನೇ ಹಂತವನ್ನು ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ. ಸೆ.13ಕ್ಕೆ ಟಿ. ಶೆಟ್ಟಿಗೇರಿಯ ಕೊರಕೊಟ್ ಅಯ್ಯಪ್ಪ ದೇವರಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ.
ಹಾಕಿ ಹಬ್ಬದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಮಂಗಳವಾರ (ಆ.26) ವಿರಾಜಪೇಟೆಯಲ್ಲಿ ಎ.ಎಸ್. ಪೊನ್ನಣ್ಣ ಅವರ ಗೃಹಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬ್ರೋಷರ್ ಬಿಡುಗಡೆ ಮಾಡಲಾಗುವುದು. ಈ ಬಾರಿಯ ಪಂದ್ಯಾವಳಿಗೆ ಸುಮಾರು 2.5 ಕೋಟಿ ರೂ. ಖರ್ಚಾಗುವ ನೀರೀಕ್ಷೆ ಇದೆ. ಒಟ್ಟು 16 ಬಹುಮಾನಗಳನ್ನು ಕೊಡಲು ನಿರ್ಧರಿಸಲಾಗಿದೆ. ಪಂದ್ಯಾವಳಿಯನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೊಸ ದಾಖಲೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
ಚೇನÀಂಡ ಕುಟುಂಬವು ಸುಮಾರು 400 ಜನಸಂಖ್ಯೆ ಇರುವ ಕುಟುಂಬವಾಗಿದ್ದು, ಕೇರಳದ ಪಯ್ಯಾವೂರಿನ ಈಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ನೈವೇದ್ಯ ಅಕ್ಕಿ ಹೊತ್ತುಕೊಂಡು ಹೋಗಿದ್ದ ಕುಟುಂಬದ ಆದಿಪುರುಷನ ಹಿನ್ನೆಲೆಯಲ್ಲಿ ಕುಟುಂಬದ ಪೌರಾಣಿಕ ಹಿನ್ನೆಲೆ ಸಾರುವ ಲಾಂಛನ ರೂಪಿಸಲಾಗಿದೆ. ಕೊಡವ ಕುಟುಂಬದಲ್ಲಿ ಮೊದಲಿಗರಾಗಿ ಈ ಲಾಂಛನ ಮತ್ತು ಧ್ವಜವನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚೇನಂಡ ಹಾಕಿ ಹಬ್ಬ ಸಮಿತಿ ಕಾರ್ಯದರ್ಶಿ ಮಧು ಮಾದಯ್ಯ, ಜಂಟಿ ಕಾರ್ಯದರ್ಶಿ ತಮ್ಮಿ ತಮ್ಮಯ್ಯ, ವಕ್ತಾರ ಸುರೇಶ್ ನಾಣಯ್ಯ
ಸಮಿತಿ ಸದಸ್ಯ ಸಚಿನ್ ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.