

ಕುಕನೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಪೂರೈಕೆಯಾಗುವ ನೀರಿನ ಗುಣಮಟ್ಟವನ್ನು ವಾರಕ್ಕೆ ಒಂದು ಬಾರಿ ಪರೀಕ್ಷೆ ನಡೆಸಬೇಕು ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಪ್ರಯೋಗಾಲಯದ ರಾಸಾಯನಿಕ ತಜ್ಞ ಬಸವರಾಜ ಹೂಗಾರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ರಾಸಾಯನಿಕ ಪರಿಕರಣೆಗಳ ಕಿಟ್‌ಗಳನ್ನು ಶುಕ್ರವಾರ ವಿತರಿಸಿ ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ಬೋರ್‌ವೆಲ್ ಸುತ್ತಮುತ್ತ ಪ್ಲಾಸ್ಟಿಕ್‌ನಂತಹ ವಸ್ತು, ಚರಂಡಿ ನೀರು, ಕಸದ ತಿಪ್ಪೆ ಗುಂಡಿಗಳಲ್ಲಿ ಕಲುಷಿತಗೊಂಡಿರುವ ನೀರು ನಿಂತು ವಿವಿಧ ರೀತಿಯ ಜಲಮೂಲಗಳಿಂದ ಅಂತರ್ಜಲ ಸೇರಿಕೊಂಡು ನೀರು ಕಲುಷಿತಗೊಳ್ಳುತ್ತಿವೆ.
ಇಂಥ ನೀರಿನಲ್ಲಿ ಅಧಿಕವಾಗಿ ಸೂಕ್ಷ್ಮಾಣು ಜೀವಿಗಳು ಕಂಡು ಬಂದಾಗ ಅದನ್ನು ಸೇವನೆ ಮಾಡಿದರೆ ವಾಂತಿ-ಭೇದಿಗೆ ತುತ್ತಾಗುತ್ತಾರೆ. ಕಾರಣ ಜನ ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಪಂಚಾಯಿತಿ ಮಟ್ಟದಲ್ಲಿ ಪ್ರಾಥಮಿಕವಾಗಿ ಫಿಲ್ಡ್ ಟೆಸ್ಟ್ ಕಿಟ್ ಮೂಲಕ ಪ್ರತಿ ವಾರಕ್ಕೆ ಒಮ್ಮೆಯಾದರೂ ನೀರು ಪರಿಕ್ಷಿಸಿದರೆ ಗುಣಮಟ್ಟದ ನೀರು ಕೊಡಬಹುದು ಎಂದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಪ್ರಯೋಗಾಲಯದ ರಾಸಾಯನಿಕ ತಜ್ಞರ ತಂಡದ ಮಾರುತೇಶ್ ಬಿ.ಎನ್ ಹಳ್ಳಿ, ಆದಪ್ಪ ಕಬ್ಬಿಣದ ಪ್ರಾತ್ಯಕ್ಷಿಕವಾಗಿ ನೀರಿನ ಗುಣಮಟ್ಟ ಪರಿಕ್ಷಿಸುವ ವಿಧಾನ ತಿಳಿಸಿದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ತಾಂತ್ರಿಕ ಸಹಾಯಕಿ ವಿನಾಯಕ, ಗ್ರಾಪಂ ಪಿಡಿಒಗಳು ಇತರರಿದ್ದರು.