

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕೈಗಾರೀಕರಣದತ್ತ ವೇಗವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ತಾಲೂಕಿಗೆ ಕೈಗಾರಿಕೆಗಳ ಸ್ಥಾಪನೆ ವರವೋ ಅಥವಾ ಶಾಪವೋ ಎಂಬ ಜಿಜ್ಞಾಸೆ ಮೂಡಿಸುವಂತಾಗಿದೆ. ಒಂದು ಕಡೆ ಕೈಗಾರಿಕೆಗಳ ರಾಸಾಯನಿಕಯುಕ್ತ ನೀರನ್ನು ನೇರವಾಗಿ ಜಲಮೂಲಗಳಿಗೆ ಹರಿಸುತ್ತಿದ್ದರೆ ಮತ್ತೊಂದು ಕಡೆ ಅರಣ್ಯದಂಚಿನ ಗ್ರಾಮಗಳ ಸಮೀಪ ಅಕ್ರಮವಾಗಿ ಡಂಪ್ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯ ಚೊಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳಿಂದ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ನೀರನ್ನು ಸುರಿಯಲಾಗುತ್ತಿದೆ. ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ನೀರನ್ನು ರಾಜಕಾಲುವೆಗಳ ಮೂಲಕ ಜಲಮೂಲಗಳಿಗೆ ಹರಿಸುತ್ತಿರುವ ಬಗ್ಗೆ ತಾಲೂಕಿನ ಜನತೆ ಆಗಾಗ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸುವ ಪ್ರಕರಣಗಳು ನಡೆಯುತ್ತಲೇ ಇವೆ, ಏತನ್ಯಧ್ಯೆ ಟ್ಯಾಕ್ಟರ್‌ಗಳಲ್ಲಿ ರಾಸಾಯನಿಕ ನೀರನ್ನು ತುಂಬಿಕೊಂಡು ಬಂದು ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಹೊಸ ದಂಧೆ ಕಾಣಿಸಿಕೊಂಡಿದ್ದು ತಾಲೂಕಿನ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದೊಡ್ಡಬಳ್ಳಾಪುರದಿಂದ ಗುಂಡುಂಗೆರೆ ಹೊಸಹಳ್ಳಿಗೆ ಹೋಗುವ ದಾರಿಯಲ್ಲಿನ ದೊಡ್ಡ ಹಳ್ಳ ಸಮೀಪ ಚೊಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ದುಷ್ಕೃತ್ಯ ನಡೆಯುತ್ತಿದ್ದು ಈ ಭಾಗದ ಜನರು ಆತಂಕಗೊಂಡಿದ್ದಾರೆ.
ನಂಟಿಲ್ಲದಿದ್ದರೂ ಸಂಕಷ್ಟ: ಈಗಾಗಲೇ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ಜತೆಗೆ ಭಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ನೀರು ಜಲಮೂಲ ಸೇರುತ್ತಿದ್ದು ಈ ಭಾಗದ ಅಂತರ್ಜಲಕ್ಕೆ ಕುತ್ತು ಬಂದಿದೆ. ಈ ಭಾಗದಲ್ಲಿ ಕೈಗಾರಕೆಗಳು ಹೆಚ್ಚಿದ್ದು ಇಂಥ ದುಷ್ಕೃತ್ಯಕ್ಕೆ ದಾರಿಯಾಗಿದೆ ಆದರೆ ಯಾವುದೇ ಕೈಗಾರಿಕೆಗಳ ನಂಟು ಇಲ್ಲದಿರುವ ಈ ಜಾಗದಲ್ಲಿ ಕೆಮಿಕಲ್ ವಾಸನೆ ಮೂಗಿಗೆ ಬಡಿಯುವಂತಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಈ ಜಾಗದಲ್ಲಿ ಈ ಕೃತ್ಯ ಎಸಗುತ್ತಿರುವುದು ಗ್ರಾಮೀಣ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಬೆಟ್ಟ ಗುಡ್ಡಗಳಿಂದ ಕೂಡಿರುವ ಹಸಿರು ಹೊದ್ದಿರುವ ಈ ಅರಣ್ಯ ಪ್ರದೇಶದಲ್ಲಿ ರಾಸಾನಿಕ ನೀರು ಹೊಳೆಯಂತೆ ಹರಿಯುತ್ತಿದ್ದು ಸುಂದರ ಪರಿಸರಕ್ಕೆ ಕೊಳ್ಳಿ ಇಟ್ಟಂತಾಗಿದೆ. ಗುಂಡಮಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಟ್ಟಗುಡ್ಡಗಳಿಂದ ಹರಿದು ಬರುವ ಜೌಗು ನೀರು ಶುದ್ಧವಾಗಿದ್ದು ಈ ಭಾಗದ ಕೊಳವೆಬಾವಿಗಳಲ್ಲಿ ಉತ್ತಮ ನೀರು ಲಭ್ಯವಾಗುತ್ತಿದೆ. ಇದೀಗ ರಾಸಾಯನಿಕ ನೀರು ಭೂಗರ್ಭ ಸೇರುತ್ತಿದ್ದು ಮುಂದಿನ ದಿನಗಳಲ್ಲಿ ಕೊಳವೆಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುವುದರಲ್ಲಿ ಅನುಮಾನವಿಲ್ಲ ಎಂಬುದು ಈ ಭಾಗದ ಜನರ ಆತಂಕವಾಗಿದೆ.
ಪ್ರವಾಸೋದ್ಯಮ ತಾಣವಾಗಬೇಕಿದ್ದ ಜಾಗ: ಇಲ್ಲಿನ ಬೆಟ್ಟಗುಡ್ಡದ ಪ್ರಕೃತಿ ಸೌಂದರ್ಯ ಹಾಗೂ ಇಲ್ಲಿನ ವಿಶಾಲವಾದ ಕೆರೆಯಲ್ಲಿ ಬೋಟಿಂಗ್ ಸೇರಿ ಪ್ರವಾಸೋದ್ಯಮ ಚಟುವಟಿಕೆ ನಡೆಸುವ ಬಗ್ಗೆ ಆಗಾಗ ವಿಷಯ ಪ್ರಸ್ತಾಪವಾಗುತ್ತಿರುತ್ತದೆ. ಭವಿಷ್ಯದಲ್ಲಿ ಪ್ರವಾಸೋದ್ಯಮ ತಾಣವಾಗಲಿದೆ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ. ಆದರೆ ಕಿಡಿಗೇಡಿಗಳು ರಾಸಾಯನಿಕ ನೀರು ಸುರಿದು ಇಡೀ ಪರಿಸರವನ್ನು ಆಪೋಷಣ ತೆಗೆದುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂಬ ಆಕ್ರೋಶ ಕೇಳಿಬರುತ್ತಿದೆ.
ಅರಣ್ಯ ಪ್ರದೇಶದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ, ಚೊಕ್ಕನಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರಾಸಾಯನಿಕ ನೀರನ್ನು ಹರಿಬಿಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದವರ ಗಮನಕ್ಕೆ ತರಲಾಗುವುದು ಜತೆಗೆ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು.
ಅಭಿಷೇಕ್, ಉಪ ಅರಣ್ಯ ಸಂರಕ್ಷಾಧಿಕಾರಿ ಬೆಂ.ಗ್ರಾಮಾಂತರ
ತಾಲೂಕಿನಲ್ಲಿ ಗುಂಡುಂಗೆರೆ ಪಂಚಾಯಿತಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ್ದು ಈ ಭಾಗದಲ್ಲಿ ಶುದ್ಧ ನೀರು ಸಿಗುತ್ತದೆ, ಬೆಟ್ಟಗುಡ್ಡಗಳ ಜೋಪು ನೀರಿನಿಂದ ಅಂತರ್ಜಲ ಸಮೃದ್ಧವಾಗಿದೆ ಆದರೆ ಇಂಥಹ ಜಾಗವನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಇಲ್ಲಿನ ಕೊಳಚೆ ನೀರನ್ನು ಹಾಗೂ ಕೊಳಚೆ ನೀರು ಹೀರಿಕೊಂಡಿರುವ ಒಂದು ಅಡಿಯುಷ್ಟು ಮಣ್ಣನ್ನು ವಿಲೇವಾರಿ ಮಾಡಬೇಕು ಜತೆಗೆ ಈ ಭಾಗದಲ್ಲಿ ಮತ್ತೆ ಇದು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು.
ಟಿ.ಕೆ.ವಸಂತ್‌ಕುಮಾರ್, ಅರ್ಕಾವತಿ ನದಿ ಹೋರಾಟ ಸಮಿತಿ ದೊಡ್ಡಬಳ್ಳಾಪುರ