

ಹುಮನಾಬಾದ್: ಪಟ್ಟಣದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ಉತ್ಪತ್ತಿಯಾಗುತ್ತಿರುವ ರಾಸಾಯನಿಕ ತ್ಯಾಜ್ಯದ ನೀರನ್ನು ಮಾಣಿಕನಗರ ಗ್ರಾಮದ ಹಳ್ಳದ ಮೂಲಕ ಕಾರಂಜಾ ಜಲಾಶಯಕ್ಕೆ ಸೇರುತ್ತಿದ್ದು, ಕೂಡಲೇ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಪ್ರಮುಖರು ಒತ್ತಾಯಿಸಿದ್ದಾರೆ.
ಸ್ಥಳೀಯ ಪ್ರಮುಖರ ನಿಯೋಗ ಮಂಗಳವಾರ ತಹಸಿಲ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅಂಜುಂ ತಬಸ್ಸುಮ್ ಅವರಿಗೆ ಸಲ್ಲಿಸಿ, ಕಳೆದ ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ರಾಸಾಯನಿಕ ತ್ಯಾಜ್ಯ ಸಂಗ್ರಹಿಸಿ ಹಳ್ಳಗಳ ಮೂಲಕ ಸೋಮವಾರ ರಾತ್ರಿ ಹರಿದು ಬಿಟ್ಟಿರುವುದರಿಂದ ದುರ್ವಾಸನೆ ಬೀರುತ್ತಿದೆ. ಮಾಲಿನ್ಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ತಾವುಗಳು ತನಿಖೆ ನಡೆಸಿ ತಪ್ಪಿತಸ್ಥ ಕಾರ್ಖಾನೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಹುಡಗಿ ಗ್ರಾಮದ ಹಳ್ಳಗಳಲ್ಲಿ ಮೀನು ಸೇರಿ ಜಲಚರಗಳು ಸಾವನಪ್ಪಿದ್ದವು. ಇದೀಗ ಹುಮನಾಬಾದ್, ಬೀದರ್, ಭಾಲ್ಕಿ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕಾರಂಜಾ ಜಲಾಶಯದ ನೀರಿಗೆ ರಾಸಾಯನಿಕ ತ್ಯಾಜ್ಯ ಸೇರುತ್ತಿದೆ. ಈಗಾಗಲೇ ಡೆಂಘೆ, ಮಲೇರಿಯಾ ಅಂತಹ ರೋಗಗಳು ಹರಡುತ್ತಿದ್ದು, ತಕ್ಷಣ ಸಂಬಂಧಿತ ಅಧಿಕಾರಿಗಳು ತಂಡ ರಚಿಸಿ ತನಿಖೆ ಮಾಡಿ ಕಾರ್ಖಾನೆ ಮಾಲೀಕರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪುರಸಭೆ ಸದಸ್ಯ ರಮೇಶ ಕಲ್ಲೂರ, ಗಡವಂತಿ, ಮಾಣಿಕನಗರ ಗ್ರಾಮಸ್ಥರಾದ ರವಿಕುಮಾರ ಹೊಸಳ್ಳಿ, ಸಂದೀಪ ಮುಗಳಿ, ಮೀಲಿನ ಮೈಸಲಗೆ, ಸತ್ಯಶೀಲ ಈರುಳೆ, ಸತೀಶಕುಮಾರ ಪವಾರ್ ಇತರರಿದ್ದರು.