ಕೆರೆಗೆ ರಾಸಾಯನಿಕ ತ್ಯಾಜ್ಯ: ನೆರೆರಾಜ್ಯದ ನಂಬರ್ ಪ್ಲೇಟ್ ಬಳಸಿ ಕೃತ್ಯ

City 1
Published on

| ರಮೇಶ ದೊಡ್ಡಪುರ ಬೆಂಗಳೂರು

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ಸುಪ್ರೀಂಕೋರ್ಟ್ ನಂತಹ ಸಂಸ್ಥೆಗಳು ಮೇಲಿಂದ ಮೇಲೆ ನಿಗಾ ವಹಿಸಿ ಕೆರೆಗಳನ್ನು ಉಳಿಸಲು ಮುಂದಾಗಿದ್ದರೂ ಬೆಂಗಳೂರಿನಲ್ಲಿ ರಾಸಾಯನಿಕಗಳನ್ನು ಅನಧಿಕೃತವಾಗಿ ಕೆರೆಗಳಿಗೆ ಸುರಿಯುವ ದಂಧೆ ಅವ್ಯಾಹತವಾಗಿ ನಡೆದಿದೆ.

ಕಾರ್ಖಾನೆಗಳ ಹಾನಿಕಾರಕ ರಾಸಾಯನಿಕವನ್ನು ಸಂಸ್ಕರಣೆಗೆ ಒಳಪಡಿಸದ ಮಾಲೀಕರು, ನೆರೆ ರಾಜ್ಯದ ನಕಲಿ ನಂಬರ್ ಪ್ಲೇಟ್​ಗಳನ್ನು ಬಳಸಿರುವ ಟ್ಯಾಂಕರ್​ಗಳ ಮೂಲಕ ಕೆರೆಗೆ ಸುರಿಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ರಾತ್ರಿ ಕಾರ್ಯಾಚರಣೆ: ನಗರದ ಕೆರೆಗಳನ್ನು ರಕ್ಷಣೆ ಮಾಡಲು ಬಿಬಿಎಂಪಿ ವತಿಯಿಂದ ಮಾರ್ಷಲ್​ಗಳನ್ನು ನೇಮಕ ಮಾಡಲಾಗಿದೆ. ಕಸ, ಕಟ್ಟಡ ತ್ಯಾಜ್ಯ ಮುಂತಾದ ವಸ್ತುಗಳನ್ನು ಸುರಿಯದಂತೆ ನಿಗಾವಹಿಸುವುದು ಇವರ ಕರ್ತವ್ಯ. ಅದೇ ರೀತಿ ಕೆರೆ, ಕಾಲುವೆಗಳಿಗೆ ಹಾನಿಕಾರಕ ವಸ್ತುಗಳನ್ನು ಅನಧಿಕೃತವಾಗಿ ಸುರಿಯುವುದನ್ನು ತಡೆಯಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕರಾಮಾನಿಮಂ) ವತಿಯಿಂದಲೂ ಮಾರ್ಷಲ್​ಗಳನ್ನು ನೇಮಕ ಮಾಡಲಾಗಿದೆ. ಬೆಂಗಳೂರು ದಕ್ಷಿಣದ ಸಿಂಗಸಂದ್ರ ವಾರ್ಡ್ ನಂತರದಲ್ಲಿರುವ ಹರಳೂರಿನ ಕೆರೆಗೆ 020ರ ಆ.20ರಂದು ಟ್ಯಾಂಕರ್​ನಲ್ಲಿ ತಂದಿದ್ದ ರಾಸಾಯನಿಕವನ್ನು ಸುರಿದು ಹೋಗಿದ್ದನ್ನು ಮಾರ್ಷಲ್​ಗಳು ಗಮನಿಸಿದ್ದರು. ಹರಳೂರು ಕೆರೆಗೆ ಹೊಂದಿಕೊಂಡಿರುವ ಸಿಲ್ವರ್ ಕೌಂಟಿ ರಸ್ತೆಯ ಬದಿಯಲ್ಲಿ ರಾಸಾಯನಿಕ ಸುರಿಯಲಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ಪ್ರತಿನಿತ್ಯ ಗಸ್ತು ಮಾಡುತ್ತಿದ್ದ ಮಾರ್ಷಲ್​ಗಳಿಗೆ ಸೆ.9ರ ರಾತ್ರಿ ಅದೇ ಟ್ಯಾಂಕರ್ ರಾಸಾಯನಿಕ ಸುರಿಯುತ್ತಿದ್ದಾಗ ಸಿಕ್ಕಿಬಿದ್ದಿದೆ.

ಸಂಸ್ಕರಣೆಗೆ ಏಕೆ ನೀಡುವುದಿಲ್ಲ?

ಯಾವುದೇ ಕೈಗಾರಿಕೆಯಿಂದ ರಾಸಾಯನಿಕಗಳನ್ನು ನೇರವಾಗಿ ಕೆರೆ, ಕಾಲುವೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಚೆಲ್ಲುವಂತಿಲ್ಲ. ಸ್ವಂತ ಸಂಸ್ಕರಣ ಘಟಕ ಅಳವಡಿಸಿ, ಹಾನಿಕಾರಕ ಅಂಶ ಹೊರತೆಗೆದು ನೀರನ್ನು ಹೊರಗೆ ಬಿಡಬೇಕು. ಸ್ವಂತ ಘಟಕ ಅಳವಡಿಸುವ ಸಾಮರ್ಥ್ಯ ಇಲ್ಲವಾದಲ್ಲಿ ಅದಕ್ಕೆಂದೆ ಖಾಸಗಿ ಸಂಸ್ಥೆಗಳಿವೆ. ಪ್ರತಿ ಲೀಟರ್ ತ್ಯಾಜ್ಯಕ್ಕೆ ಇಂತಿಷ್ಟು ಶುಲ್ಕ ಪಡೆದು ಸಂಸ್ಕರಣೆ ನಡೆಸುತ್ತವೆ. ಆದರೆ ಸಂಸ್ಕರಣೆಗೆ ನೀಡುವ ಹಣವನ್ನು ಉಳಿಸಲು ಕಾರ್ಖಾನೆಗಳು ಇಂತಹ ದಂಧೆಗೆ ಇಳಿಯುತ್ತವೆ.

ಇಂತಹ ವಿಚಾರ ಗಳು ಗಮನಕ್ಕೆ ಬಂದಿವೆ. ಇದೇ ಕಾರಣಕ್ಕೆ ಮಾರ್ಷಲ್​ಗಳು ರಾತ್ರಿ ಗಸ್ತು ನಡೆಸುತ್ತಿದ್ದಾರೆ. ಇದೀಗ ಹರ ಳೂರು ಪ್ರಕರಣ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. | ಶ್ರೀನಿವಾಸುಲು ಕರಾಮಾನಿಮಂ ಸದಸ್ಯ ಕಾರ್ಯದರ್ಶಿ

ಟ್ಯಾಂಕರ್​ಗೆ ಬೈಕ್ ನಂಬರ್

ಸಿಕ್ಕ ಟ್ಯಾಂಕರ್ ವಶಕ್ಕೆ ಪಡೆದ ಮಾರ್ಷಲ್​ಗಳು ಮಾರನೆಯ ದಿನ ಅದರ ಮಾಲೀಕರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಉದ್ದೇಶ ಹೊಂದಿದ್ದರು. ಆದರೆ ವಾಹನದ ಸಂಖ್ಯೆ ಪರಿಶೀಲಿಸಿದಾಗ ಅಧಿಕಾರಿಗಳಿಗೆ ಶಾಕ್ ಆಗಿತ್ತು. ಅದರಲ್ಲಿದ್ದ ಕೆಎಲ್ 03- ಕೆ 1116 ನಂಬರ್ ಅನಿಲ್ ಕೆ. ರವಿ ಎಂಬುವರ ಹೆಸರಲ್ಲಿತ್ತು. ಆ ಸಂಖ್ಯೆ ಟ್ಯಾಂಕರ್​ನದ್ದಾಗಿರದೆ ಬಜಾಜ್ ಕಂಪನಿಯ ಸಿಟಿ 100 ಬೈಕ್​ನದ್ದಾಗಿತ್ತು. ಸಾರ್ವಜನಿಕರು ಅಥವಾ ಪೊಲೀಸರ ಕೈಗೆ ಸಿಕ್ಕಿದರೆ ಮಾಲೀಕರು ಸಿಕ್ಕಿಕೊಳ್ಳಬಾರದು, ಚಾಲಕನ ಮೂಲಕ ದಂಡ ಕಟ್ಟಿಸಿ ಬಿಡಿಸಿಕೊಳ್ಳಬೇಕು ಎಂಬ ಹುನ್ನಾರದಲ್ಲಿ ಈ ದಂಧೆ ನಡೆಸಲಾಗುತ್ತಿದೆ ಎಂಬುದು ಮಂಡಳಿ ಅಧಿಕಾರಿಗಳ ಗಮನಕ್ಕೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net