ಆಧುನಿಕ ಬೇಸಾಯದಿಂದ ರಾಸಾಯನಿಕ ಮಾಲಿನ್ಯ : ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಕುಲಸಚಿವ ಎಸ್.ಕುಮಾರ್ ವಿಷಾದ

3
Published on

ಮೈಸೂರು: ಇಂದಿನ ಕೃಷಿಯಲ್ಲಿ ಹೆಚ್ಚುವರಿ ಬೆಳೆ ಸಿಗುವುದಾದರೂ, ಮಣ್ಣಿನ ಸವಕಳಿ, ನೀರಿನ ಅಭಾವ ಮತ್ತು ರಾಸಾಯನಿಕ ಮಾಲಿನ್ಯದಂಥ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದು ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಕುಲಸಚಿವ ಎಸ್.ಕುಮಾರ್ ವಿಷಾದಿಸಿದರು.

ಪ್ರಸಾರ ಭಾರತಿ, ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ, ಮೈಸೂರು ಆಕಾಶವಾಣಿ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಆಯಿಷ್ ಅಕಾಡೆಮಿಕ್ ಬ್ಲಾಕ್ ಸೆಮಿನಾರ್ ಹಾಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ರೇಡಿಯೋ ಕಿಸಾನ್ ದಿನದ ಸಂದರ್ಭದಲ್ಲಿ ವೇದ ಕೃಷಿ ಹಾಗೂ ವಾಕ್ ಶ್ರವಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಾಚೀನ ಕೃಷಿಗೂ ಆಧುನಿಕ ಕೃಷಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಪ್ರಾಚೀನ ಕೃಷಿ ಪರಿಸರ ಸ್ನೇಹಿ ಆಗಿತ್ತು. ಹಿಂದಿನ ಕೃಷಿ ಪದ್ಧತಿಯಲ್ಲಿ ಮರದ ನೇಗಿಲು, ನೆಲಬಾವಿ, ಕೆರೆ, ಕಟ್ಟೆ, ಕಾಲುವೆ ಇವುಗಳಿಂದ ಏತ ನೀರಾವರಿ ಮೂಲಕ ಹಾಗೂ ಮಾನವ ಸಂಪನ್ಮೂಲಗಳ ಮೇಲೆ ಸಾಗುವುದಾಗಿತ್ತು. ಇದೇ ಸಾವಯವದ ಕಲ್ಪನೆ. ಇದರಲ್ಲಿ ಉತ್ಪಾದಕತೆಯ ಪ್ರಮಾಣ ಕಡಿಮೆಯಿದ್ದರೂ. ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು ಎಂದರು.

ಆದರೆ ಇಂದಿನ ಕೃಷಿಯು ಸಂಪೂರ್ಣ ಯಂತ್ರಗಳನ್ನು ಅವಲಂಬಿಸಿದೆ. ಟ್ರ್ಯಾಕ್ಟರ್, ಕೊಯ್ಲು ಮಾಡುವ ಯಂತ್ರ ಹಾಗೂ ಇತರ ಅವಶ್ಯಕತೆಗೆ ಬಳಸಬಹುದಾದ ಯಂತ್ರಗಳು, ನೀರಾವರಿಗೆ ಬೋರ್‌ವೆಲ್, ಹನಿ ನೀರಾವರಿಯನ್ನು ಅವಲಂಬಿಸಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ತೆಗೆಯಬಹುದು. ಆದರೆ ಭೂಮಿಯ ಅಂರ್ತಜಲ ಕುಂಠಿತಗೊಳ್ಳುತ್ತದೆ. ಹಾಗೆಯೇ ಅಂರ್ತಜಲವೂ ಬತ್ತಿಯೂ ಹೋಗಬಹುದು. ಅತಿಯಾದ ಬೋರ್‌ವೆಲ್ ಕೊರೆಯುವಿಕೆಯಿಂದ ಭೂಕುಸಿತಗಳು ಉಂಟಾಗುತ್ತದೆಂದು ಅಧ್ಯಯನಗಳು ತಿಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದಿನ ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರ, ಕಂಪೋಸ್ಟ್, ಹಸಿರು ಗೊಬ್ಬರ ಇತ್ಯಾದಿಗಳು ಬಳಕೆಯಾಗುತ್ತಿದ್ದವು. ಇದರಿಂದ ಭೂಮಿಯ ಫಲವತ್ತತೆಯನ್ನು ಕಾಯ್ದಿರಿಸಿಕೊಳ್ಳಲಾಗುತ್ತಿತ್ತು. ಹಾಗೆಯೇ ಪ್ರಕೃತಿಯ ಸಮತೋಲನ ರಕ್ಷಿಸಲ್ಪಟ್ಟಿತ್ತು. ಇಂದಿನ ಕೃಷಿಯಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯಾಗುತ್ತವೆ. ಇದರಲ್ಲಿ ಬೆಳೆ ಹೆಚ್ಚಾಗಿ ಬಂದರೂ ವಾತಾವರಣ, ಪರಿಸರ ಹಾಗೂ ಮಣ್ಣಿನ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತವೆ ಎಂದು ಅವರು ಹೇಳಿದರು.

ಹಿಂದಿನ ಕೃಷಿಯಲ್ಲಿ ಬೆಳೆ ವೈವಿಧ್ಯಗಳು, ಬೆಳೆ ಸರದಿಯಲ್ಲಿ ಬದಲಾವಣೆ, ಮಿಶ್ರ ಬೆಳೆ ಇತ್ಯಾದಿ ಪದ್ಧತಿಗಳನ್ನು ಅನುಸರಿಸಲಾಗುತ್ತಿತ್ತು. ಇಂತಹ ವೈವಿಧ್ಯಗಳಿಂದ ಭೂಮಿಯ ಫಲವತ್ತತೆ ಹಾಗೆಯೇ ಉಳಿಯುತ್ತಿತ್ತು. ಇಂದಿನ ಕೃಷಿಯು ಒಂದೇ ಬೆಳೆಯನ್ನು ವಿತ್ತೀಯ ದೃಷ್ಟಿಯಿಂದ ಬೆಳೆಯಲು ಉತ್ತೇಜಿಸುತ್ತದೆ. ಇದರಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಬೆಳೆಯೂ ಹಲವಾರು ರೋಗಗಳಿಗೆ, ಕ್ರಿಮಿಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಹೆಚ್ಚಿನ ಕ್ರಿಮಿನಾಶಕ ಸಿಂಪಡಣೆಯಿಂದ ಮಾನವರ ಆರೋಗ್ಯ ಏರುಪೇರುಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಯಿಷ್ ಪ್ರಭಾರ ನಿರ್ದೇಶಕಿ ಡಾ.ಪಿ. ಮಂಜುಳಾ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಆಕಾಶವಾಣಿ ಉಪ ನಿರ್ದೇಶಕ ಎಸ್.ಎಸ್. ಉಮೇಶ್, ಸಹಾಯಕ ನಿರ್ದೇಶಕ ವಿದ್ಯಾಶಂಕರ್, ಕಾರ್ಯಕ್ರಮ ನಿರೂಪಕ ಕೇಶವಮೂರ್ತಿ, ಲೋಕೇಶ್ವರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net