

ಮಂಡ್ಯ: ಖಾಸಗಿಯವರ ಸಹಭಾಗಿತ್ವದಲ್ಲಿ ರಾಸಾಯನಿಕ ಮುಕ್ತ ಬೆಲ್ಲದ ಉತ್ಪಾದನವನ್ನು ಮಾಡಲಾಗುವುದು. ಇದಕ್ಕಾಗಿ ಸುತ್ತಮುತ್ತಲಿನ ರೈತರು ಉತ್ತಮ ಗುಣಮಟ್ಟದ ಕಬ್ಬನ್ನು ನೀಡಬೇಕು ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಮನವಿ ಮಾಡಿದರು.
ತಾಲೂಕಿನ ವಿ.ಸಿ ಫಾರಂನಲ್ಲಿ ಬೆಂಗಳೂರು ಕೃಷಿ ವಿವಿ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾನಿಲಯ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾಯೋಗಿಕವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ರಾಸಾಯನಿಕ ಮುಕ್ತ ಬೆಲ್ಲ ತಯಾರು ಮಾಡುವ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಘಟಕ ಉತ್ತಮವಾದ ಕೆಲಸ ನಿರ್ವಹಿಸಿ ಕಬ್ಬು ಬೆಳೆಗಾರರಿಗೆ ವರದಾನವಾಗಲಿ. ಕೃಷಿ ಯಂತ್ರೋಪಕರಣಗಳ ಬಹಳ ಉಪಯುಕ್ತತೆಯನ್ನು ರೈತರು ಪಡೆದುಕೊಳ್ಳಬೇಕು. ನಾಟಿ ಹಾಗೂ ಬೆಳೆದ ಫಸಲನ್ನು ಕುಯ್ಯುವ ತಂತ್ರಜ್ಞಾನಕ್ಕೆ ಬೇಕಾಗುವಂತಹ ಸಾಕಷ್ಟು ಯಂತ್ರೋಪಕರಣಗಳ ಲಭ್ಯವಿದೆ. ಯಂತ್ರೋಪಕರಣಗಳು ಇಲ್ಲದಿದ್ದರೆ ಕೃಷಿ ಮಾಡುವುದು ತುಂಬಾ ಕಠಿಣದ ಪರಿಸ್ಥಿತಿಯಾಗಿದೆ. ಆದ್ದರಿಂದ ಹೊಸ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಯುವ ಸಮೂಹ ಪಟ್ಟಣಗಳತ್ತ ವಲಸೆ ಹೋಗುತ್ತಿರುವುದನ್ನು ತಡೆಯಬೇಕು. ಕೃಷಿ ಯಂತ್ರೋಪಕರಣಗಳಿಂದ ರೈತರಿಗೆ ಸಮಯದ ಉಳಿತಾಯ ಸಹ ಕೊಡ ಆಗುತ್ತದೆ. ಪ್ರಸ್ತುತದ ದಿನಗಳಲ್ಲಿ ಕೃಷಿ ರಂಗದಲ್ಲಿ ಆಗುವಂತಹ ಅನೇಕ ತೊಂದರೆಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಈ ಮೂಲಕ ರೈತರಿಗೆ ನೆರವಾಗುವಂತೆ ಅನೇಕ ಮಾಹಿತಿಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳ ಮೂಲಕ ನೀಡಲಾಗುತ್ತಿದೆ ಎಂದರು.
ಬೆಂಗಳೂರಿನ ಕೃಷಿ ವಿವಿ ಸದಸ್ಯರಾದ ಡಾ.ಪಿ.ಎಚ್.ರಾಮಾಂಜನಿಗೌಡ, ಡಾ.ಟಿ.ಎಂ.ಅರವಿಂದ್, ಡಾ.ಒ.ಎಸ್.ದಯಾನಂದ, ಡಾ. ಆರ್.ಶ್ರೀರಾಮ, ಹಾಸನ ಜಿಲ್ಲೆಯ ಮಹಾವಿದ್ಯಾನಿಲಯದ ಡೀನ್ ಡಾ.ಎಸ್.ಎನ್.ವಾಸುದೇವನ್, ವಿ.ಸಿ ಫಾರಂ ಮಹಾವಿದ್ಯಾನಿಲಯದ ಡೀನ್ ಡಾ.ಎಸ್.ಎಸ್.ಪ್ರಕಾಶ್, ವಲಯ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಶಿವಕುಮಾರ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎನ್.ಟಿ.ನರೇಶ್, ಡಾ.ಎಂ.ಎಸ್.ಶ್ರೀದೇವಿ, ಡಾ.ಕೆ.ವಿ.ಕೇಶವಯ್ಯ, ಡಾ.ಡಿ.ರಘುಪತಿ ಇತರರಿದ್ದರು.