

ಶ್ರೀರಂಗಪಟ್ಟಣ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ನೆಲಮನೆ ಚೆಲುವೇಗೌಡ ಹಾಗೂ ಉಪಾಧ್ಯಕ್ಷರಾಗಿ ಕೊಡಿಯಾಲದ ಬುಡ್ಡೇಗೌಡ ಆಯ್ಕೆಯಾಗಿದ್ದಾರೆ.
ಪಟ್ಟಣದ ಕೆಂಪೇಗೌಡ ವೃತ್ತದ ಸಮೀಪದ ಬ್ಯಾಂಕ್ ಕಚೇರಿಯಲ್ಲಿ ಶುಕ್ರವಾರ ಚುನಾವಣಾಧಿಕಾರಿ ಹಾಗೂ ತಾಪಂ ಇಒ ವೇಣು ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 13 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹಾಗೂ ಸರ್ಕಾರದ ನಾಮಿನಿ ಬಾಲಕೃಷ್ಣ ಅವರನ್ನು ಹೊರತುಪಡಿಸಿ ಇನ್ಯಾರು ಸ್ಪರ್ಧಿಸದ ಹಿನ್ನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಬ್ಯಾಂಕಿನ ಆಡಳಿತ ಸ್ಥಾನಗಳಿಗೆ ನೆಚ್ಚಿನ ಅಭ್ಯರ್ಥಿಗಳು ನೇಮಕಗೊಂಡ ಹಿನ್ನಲೆ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಧ್ಯಕ್ಷ ನೆಲಮನೆ ಚೆಲುವೇಗೌಡ ಹಾಗೂ ಉಪಾಧ್ಯಕ್ಷ ಬುಡ್ಡೇಗೌಡ ಅವರಿಗೆ ನಿರ್ದೇಶಕರು ಬೃಹತ್ ಹೂಮಾಲೆಗಳನ್ನು ಹಾಕಿ ಅಭಿನಂದನೆ ಸಲ್ಲಿಸುವ ಜತೆಗೆ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹಾಗೂ ಮನ್ಮುಲ್ ಅಧ್ಯಕ್ಷ ಬಿ.ಬೋರೇಗೌಡ ಅವರ ಪರ ಜಯಘೋಷ ಮೊಳಗಿಸಿದರು.
ಬ್ಯಾಂಕಿನ ನಿರ್ದೇಶಕರಾದ ಬಿ.ಜಿ.ನಾಗೇಶ್ ಪ್ರಭು, ದೇವರಾಜು, ಎಚ್.ಡಿ.ಮಹದೇವು, ಜೆ.ವೀಣಾ, ಕಮಲಮ್ಮ, ಚಿಕ್ಕತಾಯಮ್ಮ, ಬಿ.ಎಸ್.ವಾಸು, ಬಿ.ಎಸ್.ಮೋಹನ್ ಕುಮಾರ್ ಹಾಗೂ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾದ ಬಿ.ಎಸ್.ಸಂದೇಶ್, ಪ್ರಾಣೇಶ್, ಕಾಂಗ್ರೆಸ್ ಮುಖಂಡರಾದ ತಡಗವಾಡಿ ಟಿ.ಕೆ.ಯತೀಶ್, ಕೂಡಲಕುಪ್ಪೆ ರವಿಶಂಕರ್, ಬಿ.ಎಸ್.ಚಂದ್ರಶೇಖರ್, ಚಿಂದಗಿರಿಕೊಪ್ಪಲು ಪುಟ್ಟೇಗೌಡ, ನೆಲಮನೆ ನಾಗೇಂದ್ರ, ಟಿ.ಎಂ.ಹೊಸೂರು ನಟರಾಜು ಇದ್ದರು.