ಜನರಿಗೆ ಅನ್ಯಾಯವಾಗದಂತೆ ತೀರ್ಮಾನ

Minister N.Cheluvarayaswamy
Published on

ನಾಗಮಂಗಲ: ರೈತರ ಪ್ರತಿಭಟನೆ ತಪ್ಪು ಎಂದು ನಾವು ಹೇಳುತ್ತಿಲ್ಲ, ಆದರೆ ವಿರೋಧ ಪಕ್ಷಗಳು ಕಾವೇರಿ ಸಮಸ್ಯೆಯನ್ನು ರಾಜಕಾರಣವಾಗಿ ತೆಗೆದುಕೊಂಡು ಪ್ರಚೋದನೆ ಮಾಡುತ್ತಿವೆ. ಅವರು ಏನೇ ಟೀಕೆ ಮಾಡಿದರು ನಮ್ಮ ಸರ್ಕಾರ ಬೆಂಗಳೂರಿನ ಜನರಿಗೆ ಹಾಗೂ ಕಾವೇರಿ ಅಚ್ಚುಕಟ್ಟು ಪ್ರದೇಶದ ಜನರಿಗೆ ಅನ್ಯಾಯವಾಗದಂತೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಪ್ರಾಧಿಕಾರದ ಮುಂದೆ ಯಾವ ರೀತಿ ವಾದ ಮಂಡಿಸಬೇಕು ಎಂದು ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಸ್ವಲ್ಪ ಆದರೂ ಸಮಸ್ಯೆ ಸರಿಪಡಿಸಬಹುದು. ಎಚ್.ಡಿ.ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದವರು. ಸರ್ಕಾರದ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ, ನಾವು ಅವರ ಪರವಾಗಿ ನಿಂತು ರೈತರಿಗೆ ನ್ಯಾಯ ನೀಡುತ್ತೇವೆ ಎನ್ನುವುದನ್ನು ಬಿಟ್ಟು, ಪ್ರಚೋದನೆ ಮಾಡುವುದು ಸರಿಯಲ್ಲ. ಯಾರು ಎಷ್ಟೇ ಪ್ರಯತ್ನ ಮಾಡಿದ್ದರು ಅಂತಿಮವಾಗಿ ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆ ಬಾಗಲೇಬೇಕು ಎಂದರು.

ಸಿ.ಟಿ.ರವಿಗೆ ಬಾಯಿಚಪಲ. ಮಾತಾನಾಡಲೇ ಬೇಕು, ಮಾತನಾಡುತ್ತಿದ್ದಾರೆ. ಮಾತನಾಡದಿದ್ದರೆ ಅವರಿಗೆ ಆಗಲ್ಲ. ಯಾವ ಪ್ರತಿಭಟನಾಕಾರರಿಗೂ ಬಂದ್ ಮಾಡಬೇಡಿ, ಪ್ರತಿಭಟನೆ ಮಾಡಬೇಡಿ ಎಂದು ಹೇಳಲ್ಲ. ಆದರೆ ಅವರ ಎಲ್ಲ ಬೇಡಿಕೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಆದರೆ ಯಾವುದೇ ಹೋರಾಟವಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಿರಬಾರದು ಎಂದರು.

ಶ್ರೀಗಳ ಸಲಹೆ ಪರಿಗಣಿಸಿದ್ದೇವೆ: ಕಾವೇರಿ ವಿಚಾರವಾಗಿ ಆದಿಚುಂಚನಗಿರಿ ಸ್ವಾಮೀಜಿ ಅವರ ಸಲಹೆಯನ್ನು ಗಮನಿಸಿದ್ದೇನೆ. ಶ್ರೀಗಳ ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ಜತೆಗೆ ಸಾಮಾನ್ಯ ರೈತನ ಸಲಹೆಯನ್ನು ಕೂಡ ಬಹಳ ಗಂಭಿರವಾಗಿ ಪರಿಗಣಿಸಿ ತೆಗೆದುಕೊಳ್ಳುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net