

ಮಂಡ್ಯ: ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಲಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆ ಪುಣ್ಯಾತ್ಮರಿಂದ ಮೈಷುಗರ್ ಕಾರ್ಖಾನೆ ಇದುವರೆಗೂ ಪ್ರಾರಂಭವಾಗಿಲ್ಲ. ಜಿಲ್ಲೆಯಲ್ಲಿ ಸಚಿವರು, ಶಾಸಕರು ಇದ್ದಾರೆ. ಒಂದು ಗುಂಡಿ ಮುಚ್ಚಿದ್ದಾರಾ? ಶಾಲಾ ಮಕ್ಕಳಿಗೆ ಬಟ್ಟೆ ಕೊಟ್ಟಿದ್ದಾರಾ? ಕೃಷಿ ಹೊಂಡ ನಿಂತು ಹೋಗಿದೆ. ಒಟ್ಟಾರೆ ಮಂಡ್ಯ ಅಭಿವೃದ್ಧಿ ಶೂನ್ಯವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ ಟೀಕಿಸಿದರು.
ತಾಲೂಕಿನ ಸೂನಗಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ನಮ್ಮ ಕಾರ್ಯಕರ್ತರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಚುನಾವಣೆ ಐದು ವರ್ಷಕ್ಕೊಮ್ಮೆ ಬರುವುದು. 2023ರ ಚುನಾವಣೆಯಲ್ಲಿ 7 ಕ್ಷೇತ್ರವನ್ನೂ ಕಾಂಗ್ರೆಸ್ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ರೈತರು, ಹಿಂದುಳಿದವರು, ಶೋಷಿತರ ಪರ ನಿಲ್ಲಬೇಕೆಂದರೆ ಕಾಂಗ್ರೆಸ್ ಗೆಲ್ಲಿಸಬೇಕು. ನಮಗೆ ಅವಕಾಶ ಸಿಕ್ಕಾಗ ಈ ಜಿಲ್ಲೆಗೆ ಅಭಿವೃದ್ಧಿಗೊಂಡಿದೆ. ಸಾರಿಗೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಡ್ಯ, ಮಳವಳ್ಳಿ, ನಾಗಮಂಗಲ ಇತರ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಕಚೇರಿ ಸೇರಿದಂತೆ ಹಲವಾರು ಕಚೇರಿಗಳನ್ನು ತೆರೆಯಲಾಗಿದೆ. ಜಿಲ್ಲೆಯ ಜನರ ಬಗ್ಗೆ ಅಪಾರವಾದ ಗೌರವವಿದೆ. ಬಹಳಷ್ಟು ಜನ ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ನಾವು ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಜಿಲ್ಲೆಯಿಂದ ಆಯ್ಕೆಯಾದ ಕಾಂಗ್ರೆಸ್‌ನ ಹಲವು ನಾಯಕರು ಮಂಡ್ಯಕ್ಕೆ ಒಳ್ಳೆಯದನ್ನೇ ಮಾಡಿದ್ದಾರೆ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದೆ ಎಂದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ರಮೇಶ್ ಮಿತ್ರ, ಸಿದ್ದರಾಮೇಗೌಡ, ಎಂ.ಪುಟ್ಟೇಗೌಡ, ಡಾ.ಕೃಷ್ಣ, ಪ್ರಕಾಶ್, ಸಿದ್ದರಾಜು, ಕೆ.ಎಚ್.ನಾಗರಾಜು ಇತರರಿದ್ದರು.
ಸಭೆಗೂ ಮುನ್ನ ಚನ್ನಪ್ಪನದೊಡ್ಡಿ ವೃತ್ತದಿಂದ ತೆರೆದ ವಾಹನದ ಮೂಲಕ ಬೈಕ್ ರ‌್ಯಾಲಿ ನಡೆಯಿತು. ಸಭೆಯಲ್ಲಿ ಹಲವು ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.