ಚೆಲುವನ ಪ್ರಥಮ ತೆಪ್ಪೋತ್ಸವ ಸಂಭ್ರಮ

UTSAVA 1
ಮೇಲುಕೋಟೆ ಕಲ್ಯಾಣಿಯಲ್ಲಿ ವೈರಮುಡಿ ಬ್ರಹ್ಮೋತ್ಸವಕ್ಕೂ ಪೂರ್ವಭಾವಿಯಾಗಿ ಸೋಮವಾರ ರಾತ್ರಿ ಪ್ರಥಮ ತೆಪ್ಪೋತ್ಸವ ವೈಭವದಿಂದ ನೆರವೇರಿತು.
Published on

ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಥಮ ತೆಪ್ಪೋತ್ಸವ ಸೋಮವಾರ ರಾತ್ರಿ ಸಂಭ್ರಮದಿಂದ ನೆರವೇರಿತು.

ಶ್ರೀ ವಿಶ್ವವಸು ಸಂವತ್ಸರದ ವೈರಮುಡಿ ಬ್ರಹ್ಮೋತ್ಸವಕ್ಕೆ ಪೂರ್ವಭಾವಿಯಾಗಿ ಕಲ್ಯಾಣಿಯಲ್ಲಿ ಆಯೋಜಿಸಿದ್ದ ಚೆಲುವನ ಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.

ಪಾಂಡವಪುರ ಖಜಾನೆಯಿಂದ ತಂದ ಅಮೂಲ್ಯ ಮುತ್ತುಮುಡಿ ಮುತ್ತಗಳ ಹಾರಗಳೊಂದಿಗೆ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿ ಸಂಜೆ ವೈಭವದ ಉತ್ಸವ ನೆರವೇರಿಸಲಾಯಿತು. ಮಹೂರ್ತಪಠಣದ ನಂತರ ತೆಪ್ಪಮಂಟಪದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣಿಯಲ್ಲಿ ಮೂರು ಪ್ರದಕ್ಷಿಣೆಯೊಂದಿಗೆ ಪ್ರಥಮ ತೆಪ್ಪೋತ್ಸವ ರಾತ್ರಿ 8ಗಂಟೆಗೆ ಸಂಪನ್ನವಾಯಿತು.

ಚೆಲುವನಾರಾಯಣಸ್ವಾಮಿ ವೈರಮುಡಿ ಜಾತ್ರಾ ಮಹೋತ್ಸವದ ಎಲ್ಲ್ಲ ಉತ್ಸವ ಮತ್ತು ವಾಹನೋತ್ಸವಗಳಿಗೆ ವಿಶೇಷ ವಾದ್ಯ ತಂಡಗಳ ನಿಯೋಜನೆ ಮಾಡುವ ಸೇವೆಯ ಸಂಬಂಧ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದೊಂದಿಗೆ ದಶಕಗಳ ಹಿಂದೆ ಆರಂಭಗೊಂಡ ವಿಶೇಷ ಮಂಗಳವಾದ್ಯ ಕೈಂಕರ್ಯ ನಾದೋಪಾಸನ ಸೇವೆ 10ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ತೆಪ್ಪೋತ್ಸವದಂದು ವಿದ್ವಾನ್ ಆನಂದ್ ಅವರ ತಂಡ ನಾದಸ್ವರ ನುಡಿಸಿ ಉತ್ಸವಕ್ಕೆ ಮೆರಗು ನೀಡಿತು.

ಏ.2 ರಿಂದ ಏ.14ರವರೆಗೆ 14ದಿನಗಳ ಕಾಲ ನಡೆಯುವ ವೈರಮುಡಿ ಜಾತ್ರಾ ಮಹೋತ್ಸವದ ವೈವಿಧ್ಯಮಯ ವಿಶೇಷ ಉತ್ಸವಗಳಲ್ಲಿ ನುರಿತ ನಾದಸ್ವರ ಕಲಾವಿದರು ಮಂಗಳವಾದ್ಯ ಸೇವೆ ಸಲ್ಲಿಸಲಿದ್ದಾರೆ.

ವಾದ್ಯ ತಂಡಗಳನ್ನು ಪ್ರಾಯೋಜಿಸಲು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದಾರೆ. ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ , ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಮಾರ್ಗದರ್ಶನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಸಹಕಾರದಲ್ಲಿ ಅನೂಚಾನವಾದ ಸಾಂಸ್ಕೃತಿಕ ಸಂಪ್ರದಾಯ ನಾದೋಪಾಸನ ಸೇವೆಯನ್ನು ಪ್ರತಿ ವರ್ಷದಂತೆ ಹಮ್ಮಿಕೊಂಡಿದ್ದು, ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವ ಹಾಗೂ ಎಸ್‌ಎನ್‌ಐ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ 2025ರ ವೈರಮುಡಿ ಬ್ರಹ್ಮೋತ್ಸವ ವೇಳೆಯೂ ಮುಂದುವರಿಯಲಿದೆ.

ತೆಪ್ಪೋತ್ಸವದ ಅಂಗವಾಗಿ ಕಲ್ಯಾಣಿಯಲ್ಲಿ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡುವ ಜತೆಗೆ ಸರಳ ದೀಪಾಲಂಕಾರ ಮಾಡಿದ್ದು, ಭಕ್ತರಿಗೆ ಮುದನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net