

ಮಂಡ್ಯ: ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಗರುಡೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.
ಪಲ್ಲವೋತ್ಸವ ಶಾತ್ತುಮೊರೈ ಪ್ರಯುಕ್ತ ಶ್ರೀದೇವಿ, ಭೂದೇವಿ ಸಮೇತ ಶ್ರೀ ಚೆಲುವನಾರಾಯಣಸ್ವಾಮಿಗೆ ದ್ವಾದಶಾರಾಧನೆಯೊಂದಿಗೆ ಅಭಿಷೇಕ, ವೇದ ದಿವ್ಯ ಪ್ರಬಂಧ ಪಾರಾಯಣ, ಶಾತ್ತುಮೊರೈಯನ್ನು ನೆರವೇರಿಸಲಾಯಿತು.
ಪಲ್ಲವೋತ್ಸವ ಜೂ.8ರಿಂದಲೇ ಆರಂಭವಾಗಿದ್ದು ಪ್ರತಿದಿನ ಬೆಳಗ್ಗೆ ಅಭಿಷೇಕ, ಸಂಜೆ ಸ್ವಾಮಿಗೆ ಮಂಟಪ, ಅಶ್ವ, ಗಜ, ಆದಿಶೇಷ ಹನುಮಂತ ವಾಹನೋತ್ಸವಗಳು ಜರುಗಿದವು. ಕೊನೆಯ ದಿನವಾದ ಬುಧವಾರ ಗರುಡ ವಾಹನೋತ್ಸವ ಅದ್ದೂರಿಯಾಗಿ ನಡೆಯಿತು.
ಸಂಪ್ರದಾಯದಂತೆ ಮಧ್ಯಾಹ್ನ ರಾಮಾನುಜ ಶ್ರೀಶ ಸೇವಾ ಸಹಯೋಗದಲ್ಲಿ ಚೆಲುವನಾರಾಯಣಸ್ವಾಮಿ ಮುಂದೆ ಸಂಗೀತ-ನೃತ್ಯ ಸಪ್ತಾಹ ನಡೆಸಲಾಯಿತು. ಸಂಗೀತ ಸಪ್ತಾಹದಲ್ಲಿ ರಾಧಿಕಾ ರಾಮಾನುಜಂ ಮತ್ತು ಮೃದಾಲ್ ರಾಮಾನುಜಂರಿಂದ ಭರತನಾಟ್ಯ ಸೇವೆ ನಡೆಯಿತು. ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸೇರಿದಂತೆ ಇತರರು ಇದ್ದರು.