

ಎ.ಅಪ್ಪಾಜಿಗೌಡ, ಮುಳಬಾಗಿಲು
ಚೆಲುನಾಯಕನಹಳ್ಳಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲೇ ವ್ಯಾಸಂಗ ಮಾಡುವಂತಾಗಿದೆ. ಚೆಲುನಾಯಕನಹಳ್ಳಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ಸೇರಿ ಒಟ್ಟು 14 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಾಲೆಯಲ್ಲಿ ಒಂದೇ ಕೊಠಡಿ ಇದ್ದು, ಒಬ್ಬರು ಶಾಲೆಯ ಒಳಗಡೆ ತರಗತಿ ತೆಗೆದುಕೊಂಡರೆ, ಇನ್ನೊಬ್ಬರು ಶಾಲೆಯ ವರಾಂಡದಲ್ಲಿ ನೆಲದ ಮೇಲೆ ಕುಳಿತು ಪಾಠ ಮಾಡಬೇಕಾದ ಅನಿವಾರ್ಯತೆ ಇದೆ.
ಇರುವ ಒಂದು ಕೊಠಡಿಯೂ ಶಿಥಿಲಗೊಂಡಿದ್ದು, ಕಟ್ಟಡದ ಗೋಡೆ ಸೇರಿ ಮೇಲ್ಛಾವಣಿ ಕಿತ್ತುಬಿಳುತ್ತಿದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಅವರ ತಲೆಯಲ್ಲಿ ಸಿಮೆಂಟ್ ಧೂಳಿರುವುದೂ ಕಂಡು ಬರುತ್ತಿದೆ.
ಮಳೆಯಾದರಂತೂ ನೀರೆಲ್ಲ ಶಾಲೆ ಒಳಗೆ ನುಗುತ್ತದೆ. ಅಂದು ವಿದ್ಯಾರ್ಥಿಗಳಿಗೆ ರಜೆ. ಶಾಲೆ ಸುತ್ತಲೂ ನೀರು ನಿಲ್ಲುವುದರಿಂದ ದುರ್ನಾತದಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರೂ ಶಾಲೆಯ ಮಾತ್ರ ಇನ್ನೂ ದುಸ್ಥಿತಿಯಲ್ಲೇ ಇರುವುದು ವಿಪರ್ಯಾಸ. ಶಾಲೆ ದುಸ್ಥಿತಿ ಬಗ್ಗೆ ಮುಖ್ಯಶಿಕ್ಷಕಿ ಪಿ.ಪಾರ್ವತಮ್ಮ, ಸಹ ಶಿಕ್ಷಕಿ ವಿಜಯಮ್ಮ ಅವರನ್ನು ಕೇಳಿದರೆ, ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ನಾವಾದರೂ ಏನು ಮಾಡಲು ಸಾಧ್ಯ? ಇರುವ ವ್ಯವಸ್ಥೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಇಲ್ಲಿ ಕೆಲಸ ಮಾಡಲು ಭಯ ಆಗುತ್ತಿದೆ. ಪಕ್ಕದಲ್ಲಿ ಸರ್ಕಾರಿ ಜಮೀನು ಇದೆ. ಅದನ್ನಾದರೂ ಮಂಜೂರು ಮಾಡಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ.
ಶಾಲೆಯ ಕೊಠಡಿ ಒಳಭಾಗದಲ್ಲೇ ಶೌಚಗೃಹವಿದ್ದು, ನೀರಿನ ಸಂಪರ್ಕವಿಲ್ಲದ ಕಾರಣ ಬಳಸಲು ಯೋಗ್ಯವಿಲ್ಲದ ಸ್ಥಿತಿ ತಲುಪಿದೆ. ಶಾಲೆಯ ಬಿಸಿ ಊಟಕ್ಕೂ ಶಾಲೆಗೆ ಮುಂಭಾಗದಲ್ಲಿನ ಸಿಮೆಂಟ್ ತೊಟ್ಟಿಯಲ್ಲಿಂದ ನೀರು ತೆಗೆದುಕೊಂಡು ತಯಾರು ಮಾಡಲಾಗುತ್ತಿದೆ.
ಅಂಗನವಾಡಿಗೂ ಬೇಕಿದೆ ಕಾಯಕಲ್ಪ: ಶಾಲೆಯ ಪಕ್ಕದಲ್ಲಿರುವ ಅಂಗನವಾಡಿ ಕಟ್ಟಡ ಸಹ ಶಿಥಿಲಾವಸ್ಥೆ ತಲುಪಿದ್ದು, ಮೂಲಸೌಲಭ್ಯ ವಂಚಿತವಾಗಿದೆ. ಕಟ್ಟಡದ ಒಳಭಾಗದಲ್ಲೇ ಗ್ಯಾಸ್ನಿಂದ ಅಡುಗೆ ತಯಾರಿ ಮಾಡಲಾಗುತ್ತಿದ್ದು, ಸುರಕ್ಷತೆ ಕ್ರಮಗಳು ಇಲ್ಲ. 3 ರಿಂದ 6 ವರ್ಷದ 13 ಮಕ್ಕಳು, 6 ತಿಂಗಳಿಂದ 3 ವರ್ಷದ 8 ಮಕ್ಕಳು, ಒಬ್ಬರು ಬಾಣಂತಿ, ಇಬ್ಬರು ಗರ್ಭಿಣಿಯರು ಅಂಗನವಾಡಿಯನ್ನು ಆಶ್ರಯಿಸಿದ್ದು, ಸೌಲಭ್ಯ ರಹಿತ ಕಟ್ಟಡದಲ್ಲೇ ಕಾಲ ಕಳೆಯಬೇಕಿದೆ.
ಶಿಕ್ಷಕಿಯರಲ್ಲೂ ಹೊಂದಾಣಿಕೆ ಕೊರತೆ: ಶಾಲೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಶಿಕ್ಷಕಿಯರಲ್ಲೂ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತದೆ. ಶಾಲೆ ದುಸ್ಥಿತಿ ಬಗ್ಗೆ ವಿಜಯಮ್ಮ ಅವರನ್ನು ವಿಚಾರಿಸಿದರೆ ಅಯ್ಯೋ ನನಗೇನು ಗೊತ್ತು ? ಹೊರಗಡೆ ಇರುವ ಎಚ್ಎಮ್ ಕೇಳಿ ಎಂದರೆ, ಪಾರ್ವತಮ್ಮ ಅವರನ್ನು ಕೇಳಿದರೆ ಹೆಸರಿಗಷ್ಟೇ ನಾನು ಎಚ್ಎಮ್! ನನ್ನದೇನೂ ನಡೆಯುವುದಿಲ್ಲ. ನೆಲದ ಮೇಲೆ ಕೂತು ಪಾಠ ಮಾಡುತ್ತಿದ್ದೇನೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಚೆಲುವನಾಯಕನಹಳ್ಳಿ ಶಾಲಾ ಕಟ್ಟಡ ದುರಸ್ತಿ ಮಾಡಲು ಮೇಲಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಕ್ಷಣಕ್ಕೆ ತಾತ್ಕಾಲಿಕ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಕೆ.ಆರ್.ಗಂಗರಾಮಯ್ಯ ಬಿಇಒ ಮುಳಬಾಗಿಲು
ಕುರುಡುಮಲೆ ಗ್ರಾಪಂನಿಂದ ಶಾಲೆ ಮತ್ತು ಅಂಗನವಾಡಿ ಎರಡೂ ಕಟ್ಟಡಗಳನ್ನು ದುರಸ್ತಿ ಮಾಡಲು ಸೂಚಿಸಲಾಗುವುದು. ಕಟ್ಟಡ ಸುಸ್ಥಿತಿ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು.
ಡಾ.ಕೆ.ಸರ್ವೇಶ್ ಇಒ ತಾಪಂ ಮುಳಬಾಗಿಲು