ಚೆಕ್‌ಪೋಸ್ಟ್ ಸಿಬ್ಬಂದಿಗಿಲ್ಲ ವೇತನ!, ಉಪಚುನಾವಣೆ ಮುಗಿದರೂ ಹಣ ಜಮೆಯಾಗಿಲ್ಲ

399815
Published on

ಶಿವರಾಜ ಎಂ. ಬೆಂಗಳೂರು

ಹೊಸಕೋಟೆ ವಿಧಾನಸಭಾ ಉಪಚುನಾವಣೆ ಮುಗಿದು ತಿಂಗಳುಗಳೇ ಕಳೆದಿವೆ. ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಹಗಲಿರುಳು ದುಡಿದ ಗುತ್ತಿಗೆ ಸಿಬ್ಬಂದಿಗೆ ಚುನಾವಣಾ ಆಯೋಗ ವೇತನ ಪಾವತಿಸಲು ಮೀನಮೇಷ ಎಣಿಸುತ್ತಿದೆ.

ಉಪಚುನಾವಣೆ ಮುಗಿದು ತಿಂಗಳುಗಳೇ ಕಳೆದರೂ ವೇತನ ಸಿಗದೆ ಪರದಾಡುತ್ತಿರುವ ಸಿಬ್ಬಂದಿ ತಹಸೀಲ್ದಾರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ಬರುತ್ತಿದೆ. ‘ಹಣನಾ, ಬರುತ್ತೇ ಹೋಗ್ರಿ, ನಾವೇನ್ ಮಾಡೋಣ, ಬಂದಾಗ ತಗಂಡೋಗ್ರಿ’ ಎಂಬ ಉಡಾೆ ಉತ್ತರ ಬರುತ್ತಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲದಿಂದಲೂ ಬಂದು ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ ಈಗ ವೇತನಕ್ಕಾಗಿ ಪ್ರತಿನಿತ್ಯ ಹೊಸಕೋಟೆ ತಹಸೀಲ್ದಾರ್ ಕಚೇರಿ ಅಲೆದು ಬೇಸತ್ತಿದ್ದಾರೆ.

8 ಚೆಕ್‌ಪೋಸ್ಟ್: ಉಪ್ಪಾರಹಳ್ಳಿ, ಗಡಿಗೇನಹಳ್ಳಿ, ಬಾಗೂರು, ಬೆಂಡಿಗಾನಹಳ್ಳಿ, ಇಂಟಿಗಾನಹಳ್ಳಿ ಕ್ರಾಸ್ ಸೇರಿ ಹೊಸಕೋಟೆಯ ನಾಲ್ಕೂ ದಿಕ್ಕುಗಳಲ್ಲೂ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಕರು, ಕ್ಯಾಮರಾಮನ್ ಸೇರಿ ತಲಾ 8ರಿಂದ 10 ಮಂದಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸಿಬ್ಬಂದಿ 20ದಿನ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರತಿ ಸಿಬ್ಬಂದಿಗೆ ದಿನಕ್ಕೆ 1 ಸಾವಿರ ರೂಪಾಯಿಯಂತೆ ಸುಮಾರು 20 ದಿನದ ವೇತನ ಪಾವತಿಯಾಗಬೇಕಿದೆ ಎನ್ನಲಾಗಿದೆ.

ಊಟ, ತಿಂಡಿಗೂ ಪರದಾಟ: ಚುನಾವಣೆ ವೇಳೆ ಪೊಲೀಸ್, ಚುನಾವಣಾಧಿಕಾರಿಗಳ ಸರಿಸಮನಾಗಿ ಕರ್ತವ್ಯನಿರ್ವಹಿಸಿದ ಗುತ್ತಿಗೆ ಸಿಬ್ಬಂದಿಗೆ ಸರಿಯಾಗಿ ಊಟ-ಉಪಹಾರದ ವ್ಯವಸ್ಥೆ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲ ಸಿಬ್ಬಂದಿ ಮೂರು ಪಾಳಿಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದಿದ್ದ ಗುತ್ತಿಗೆ ಸಿಬ್ಬಂದಿಗೆ ರಾತ್ರಿ ವೇಳೆ ಮಲಗಲು ಸೂಕ್ತ ಜಾಗವನ್ನೂ ನೀಡಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಜಪ್ತಿ: ಉಪಚುನಾವಣೆಯಲ್ಲಿ ಹಣ ಹಾಗೂ ಮದ್ಯದ ಹೊಳೆ ಹರಿಯುವ ಸೂಚನೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಿದ್ದರು. ಚುನಾವಣೆ ವೇಳೆ ಚೆಕ್‌ಪೋಸ್ಟ್‌ಗಳಲ್ಲಿ 7.50 ಲಕ್ಷ ರೂ.ನಗದು, 4531 ಲೀಟರ್ ಮದ್ಯ,ದಾಖಲೆ ಇಲ್ಲದ. 125 ಕುಕ್ಕರ್, 105 ಮೈಕ್ರೋಸೇಪ್ ಕಂಟೈನರ್, 7 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಲಾಗಿತ್ತು.

ಚುನಾವಣಾ ಆಯೋಗದಿಂದ ಅನುದಾನ ಬಿಡುಗಡೆಯಾಗಿದೆ, ಇದು ತಹಸೀಲ್ದಾರ್ ಖಾತೆಗೆ ಜಮೆಯಾಗಲಿದೆ. ಇನ್ನೆರಡು ದಿನಗಳಲ್ಲಿ ನೇರವಾಗಿ ಸಿಬ್ಬಂದಿ ಖಾತೆಗೆ ಜಮೆಯಾಗಲಿದೆ. ಸಿಬ್ಬಂದಿ ಆತಂಕಗೊಳ್ಳಬೇಕಿಲ್ಲ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ ನಾಲ್ಕೈದು ದಿನದ ಹಿಂದಷ್ಟೆ ಹಣ ಬಿಡುಗಡೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಬಿಲ್‌ಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರವೇ ಸಂಬಂಧಪಟ್ಟ ಸಿಬ್ಬಂದಿಗೆ ವೇತನ ಪಾವತಿಯಾಗಲಿದೆ. ಗೀತಾ, ತಹಸೀಲ್ದಾರ್, ಹೊಸಕೋಟೆ ಚುನಾವಣೆ ಮುಗಿದ ತಕ್ಷಣವೇ ಅಷ್ಟೂ ದಿನದ ವೇತನ ನೀಡುವುದಾಗಿ ತಿಳಿಸಿದ್ದರು. ನಾವು ಹಗಲು ಇರುಳು ಕಷ್ಟಪಟ್ಟು ಕರ್ತವ್ಯ ನಿರ್ವಹಿಸಿದ್ದೇವೆ. ಈಗ ನಮ್ಮ ವೇತನಕ್ಕೆ ನಾವೇ ಭಿಕ್ಷೆ ಬೇಡುವಂತಾಗಿದೆ. ಯಾರನ್ನು ಕೇಳಿದರೂ ಹಾರಿಕೆ ಉತ್ತರ ನೀಡುತ್ತಾರೆ. ಹೆಸರೇಳಲಿಚ್ಚಿಸದ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net