ಅಸಂಘಟಿತ ವಲಯಕ್ಕೆ ಬಾಣಸಿಗರು, ಪುರೋಹಿತರು: ಇ-ಶ್ರಮ ವೆಬ್​ಸೈಟ್​ನಲ್ಲಿ ನೋಂದಣಿಗೆ ಅವಕಾಶ

Priest
Published on

| ಎಚ್.ಎಸ್.ಸುಬ್ರಹ್ಮಣ್ಯ ಹಳೇಬೀಡು

ಅಡುಗೆ ಕೆಲಸಗಾರರು, ಅರ್ಚಕರು ಹಾಗೂ ಪುರೋಹಿತ ವರ್ಗವನ್ನು ಅಸಂಘಟಿತ ಕಾರ್ವಿುಕ ವಲಯಕ್ಕೆ ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರ ಇ-ಶ್ರಮ ವೆಬ್​ಸೈಟ್​ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ.

ಅಸಂಘಟಿತ ಕಾರ್ವಿುಕ ಸಮುದಾಯಕ್ಕೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಆ. 26ರಂದು ಇ-ಶ್ರಮ ಹೆಸರಿನ ಜಾಲತಾಣ (ಜಠಿಠಿಟ://ಛಿಠಜ್ಟಚಞ.ಜಟಡ.ಜ್ಞಿ) ಅನಾವರಣಗೊಳಿಸಿ, ನಿರ್ದಿಷ್ಟ ವಲಯದ ಶ್ರಮಜೀವಿಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಎರಡು ದಿನದ ಬಳಿಕ ಈ ವರ್ಗಕ್ಕೆ ಅಡುಗೆ ಕೆಲಸಗಾರರು, ಪುರೋಹಿತರು ಹಾಗೂ ಅರ್ಚಕರನ್ನೂ ಸೇರಿಸಿದ್ದು ಸೌಲಭ್ಯಗಳನ್ನು ಬಳಸಿಕೊಳ್ಳಲು ಮಾರ್ಗಸೂಚಿ ನಿಗದಿಪಡಿಸಿ ಆದೇಶಿಸಿದೆ. ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳು ಅಸಂಘಟಿತ ಕಾರ್ವಿುಕ ವಲಯಕ್ಕೆ ಇನ್ನಷ್ಟು ಸಮುದಾಯಗಳನ್ನು ಸೇರಿಸುವಂತೆ ಕೋರಿದ್ದವು. ರಾಜ್ಯದ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್ ನೇತೃತ್ವದ ನಿಯೋಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದರು.

ಯೋಜನೆಯ ಲಾಭಾಂಶಗಳು: ಇ-ಶ್ರಮ ವೆಬ್​ಸೈಟ್​ನಲ್ಲಿ ನೋಂದಣಿ ಯಶಸ್ವಿಯಾದ ಬಳಿಕ ಅರ್ಜಿದಾರರ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಅರ್ಹ ಮತ್ತು ಆಯ್ಕೆಯಾದ ಫಲಾನುಭವಿಗಳಿಗೆ ಇ-ಶ್ರಮಿಕ್ ಕಾರ್ಡ್ ವಿತರಿಸಲಾಗುತ್ತದೆ. ಅಂಗೀಕೃತ ದತ್ತಾಂಶದ ಆಧಾರದಲ್ಲಿ ಅಸಂಘಟಿತ ವಲಯದ ಕಾರ್ವಿುಕರು ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ. ಆಕಸ್ಮಿಕ ಸಾವು ಅಥವಾ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದರೆ ಪ್ರಧಾನಮಂತ್ರಿ ಆರೋಗ್ಯ ವಿಮಾ ಯೋಜನೆಯಡಿ 2 ಲಕ್ಷ ರೂ. ಮತ್ತು ಭಾಗಶಃ ಅಂಗ ಹೀನತೆಗೆ 1ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ. ಇದಲ್ಲದೆ, ವಿವಿಧ ಉದ್ಯೋಗಾವಕಾಶ ಮತ್ತು ವಲಸೆ ಕಾರ್ವಿುಕರನ್ನು ಗುರುತಿಸಿ ಅನುಕೂಲ ಕಲ್ಪಿಸಲು ಈ ಯೋಜನೆ ನೆರವಾಗಲಿದೆ.

ಯಾರಿಗುಂಟು-ಯಾರಿಗಿಲ್ಲ?: ಅಸಂಘಟಿತ ವಲಯದಲ್ಲಿದ್ದರೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಸೌಲಭ್ಯ ದೊರಕುವುದಿಲ್ಲ. 15 ರಿಂದ 59 ವರ್ಷದೊಳಗಿನವರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ರಾಜ್ಯದ ಯಾವುದೇ ವಿಮಾ ನಿಗಮ(ಇಎಸ್​ಐಸಿ) ಮತ್ತು ಭವಿಷ್ಯ ನಿಧಿ(ಇಪಿಎಫ್​ಒ) ಸಂಸ್ಥೆಯ ಸದಸ್ಯರಾಗಿರಬಾರದು. ನೋಂದಣಿಗೆ ಇ-ಕೆವೈಸಿ ಆಗಿರುವ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದ್ದು, ಸಕ್ರಿಯ ಬ್ಯಾಂಕ್ ಖಾತೆಯ ಜತೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು. ಇ-ಶ್ರಮ ವೆಬ್​ಸೈಟ್ ಮೂಲಕ ಆನ್​ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವ ವೇಳೆ ವೈಯಕ್ತಿಕ ವಿವರಗಳನ್ನು ದಾಖಲಿಸಿ ಆದಾಯ ಹಾಗೂ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಅಪ್​ಲೋಡ್ ಮಾಡಬೇಕಾಗುತ್ತದೆ. ಅಡುಗೆ ಕೆಲಸದವರು ಕ.ಸಂ. 67 ಹಾಗೂ ಅರ್ಚಕ ಮತ್ತು ಪುರೋಹಿತರು 111ರ ಅಡಿಯಲ್ಲಿ ವಿವರಗಳನ್ನು ತುಂಬಿಸಬೇಕು. ಸದ್ಯ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಜಾಲತಾಣ ಲಭ್ಯವಿರುವುದರಿಂದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್​ಸಿ) ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಅಸಂಘಟಿತ ವಲಯದ ಕಾರ್ವಿುಕರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿ ವೈಬ್​ಸೈಟ್ ಮೂಲಕ ನೋಂದಣಿಗೆ ಅವಕಾಶ ನೀಡುವ ಬಗ್ಗೆ ಮಾಹಿತಿ ದೊರಕಿತ್ತು. ಹಾಗಾಗಿ, ಮುಂಚಿತವಾಗಿಯೇ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ವಿವಿಧ ಮಂಡಳಿಗಳ ಸದಸ್ಯರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಎಲ್ಲ ಜಾತಿಯ ಅಡುಗೆ ಕೆಲಸಗಾರರು, ಪುರೋಹಿತರು ಹಾಗೂ ಅರ್ಚಕರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡಿದ್ದೆವು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದಕ್ಕೆ ಪೂರಕವಾಗಿ ಸ್ಪಂದಿಸಿರುವುದಕ್ಕೆ ಅಭಿನಂದನೆಗಳು. | ಸಚ್ಚಿದಾನಂದಮೂರ್ತಿ ಅಧ್ಯಕ್ಷ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net