

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಹಾಗೂ ಹೈದರಾಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಬದಿಯ ಡಾಬಾ ಮುಂಭಾಗದಲ್ಲಿನ ವಿದ್ಯುತ್ ತಂತಿ ಸ್ಪರ್ಶಿಸಿ ಬಾಣಸಿಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶದ ಬಾಣಸಿಗ ಪಧಮ್ ( 34) ಮೃತ. ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಸಮೀಪದ ಖಾಸಗಿ ಡಾಬಾ ಮುಂಭಾಗ ಅವಘಡ ಸಂಭವಿಸಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿವೆ.
*ಬೆಚ್ಚಿ ಬೀಳಿಸಿದ ಅವಘಡ
ಡಾಬಾ ಹಿಂಭಾಗದಲ್ಲಿ ನೀರಿನ ಟ್ಯಾಂಕ್ ಮೂಲಕ ಪೆಟ್ಟಿಗೆ ಅಂಗಡಿ ಮೇಲೆ ನಿಲ್ಲುವ ಪಧಮ್ ಇದ್ದಕ್ಕಿದ್ದಂತೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಯನ್ನು ಹಿಡಿದುಕೊಳ್ಳುತ್ತಾನೆ. ಆಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲಿಯೇ ಬಿದ್ದು ಸಾವನ್ನಪ್ಪುತ್ತಾನೆ. ಸ್ಥಳದಲ್ಲಿದ್ದ ಜನರು ಭಯದಿಂದ ಕೂಗಿಕೊಳ್ಳುತ್ತಾರೆ. ಇದೆಲ್ಲವೂ ಸಿಸಿ ಕ್ಯಾಮರಾ ದೃಶ್ಯದಲ್ಲಿ ಸೆರೆಯಾಗಿದೆ.
*ಆಕಸ್ಮಿಕ ದುರ್ಘಟನೆ?
ಹೊಸದಾಗಿ ಪ್ರಾರಂಭವಾಗಿರುವ ಡಾಬಾ ಉದ್ಘಾಟನೆ ಇತ್ತು. ಇದಕ್ಕೆ ಮೇಲಕ್ಕೆ ಹತ್ತಿ ತಳಿರು ತೋರಣ ಕಟ್ಟಲು ಮುಂದಾಗಿದ್ದ. ಇದೇ ವೇಳೆ ನೀರಿನ ಪ್ಲಾಸ್ಟಿಕ್ ಟ್ಯಾಂಕ್ ಮೇಲೆ ಕಾಲು ಜಾರಿ ಬೀಳುವಾಗ ವಿದ್ಯುತ್ ತಂತಿಯನ್ನು ಹಿಡಿದುಕೊಂಡಿದ್ದಾನೆ. ಇದರಿಂದ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೂ ಕೆಲ ದಿನಗಳಿಂದಲೂ ಆತ ಖಿನ್ನತೆಗೊಳಗಾಗಿದ್ದ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಎಂಬ ಮಾತುಗಳು ಕೇಳಿ ಬರುತ್ತಿವೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.