ಪೋಡಿ ಹೆಸರಲ್ಲಿ ನಿವೃತ್ತ ಸೈನಿಕನಿಗೆ 22 ಲಕ್ಷ ರೂ.ದೋಖಾ?

dc office new
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಒಂದೇ ಸರ್ವೆ ಸಂಖ್ಯೆಯಲ್ಲಿ ಎರಡಕ್ಕಿಂತ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರಿನಲ್ಲಿ ನೋಂದಾಯಿಸುವ ಪೋಡಿ ಅಭಿಯಾನ ಜಿಲ್ಲೆಯಲ್ಲಿ ದುರ್ಬಳಕೆಯಾಗುತ್ತಿದೆ. ಪೋಡಿ ಹೆಸರಿನಲ್ಲಿ ವಂಚಕರು ಜನರನ್ನು ವಂಚಿಸುತ್ತಿದ್ದಾರೆ. ಕಂದಾಯ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದರೂ ಜನರು ವಂಚಕರ ಬಲೆಗೆ ಬೀಳುತ್ತಿದ್ದಾರೆ. ಇಂಥಹದ್ದೊಂದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನಿವೃತ್ತ ಸೈನಿಕರೊಬ್ಬರು ಬರೋಬ್ಬರಿ 21.65 ಲಕ್ಷ ರೂ.ವಂಚನೆಗೊಳಗಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹಣ ಪಡೆದು ವಂಚನೆ?

ನಿವೃತ್ತ ಸೈನಿಕ ಬೆಂಗಳೂರಿನ ಇಂದಿರಾನಗರದ ನಿವಾಸಿಯಾಗಿರುವ ಆರ್.ಎಸ್.ಕಡಬಡಿ ಎಂಬುವರು ಚನ್ನರಾಯಪಟ್ಟಣ ಹೋಬಳಿಯ ಟಿ.ಅಗ್ರಹಾರದಲ್ಲಿ ಜಮೀನು ಖರೀದಿಸಿದ್ದರು. ಪಕ್ಕದ ಜಮೀನಿನ ಗೋಪಾಲ್ ಎಂಬುವರ ಪರಿಚಯವಾಗಿ ಜಮೀನಿಗೆ ಪೋಡಿ ಮಾಡಿಸಿಕೊಡುವುದಾಗಿ ನಿವೃತ್ತ ಸೈನಿಕನಿಂದ ಲಕ್ಷಾಂತರ ರೂ.ಪಡೆದು ವಂಚಿಸಿದ್ದಾರೆ ಎಂಬ ಅರೋಪ ಕೇಳಿಬಂದಿದೆ. ಈ ಸಂಬಂಧ ಗೋಪಾಲ್ ಹಾಗೂ ಮತ್ತೊಬ್ಬ ಮಧ್ಯವರ್ತಿ ವಿರುದ್ಧ ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರುದಾರ ಆರ್.ಎಸ್.ಕಡಬಡಿ ಅವರ ಬ್ಯಾಂಕ್ ಖಾತೆಯಿಂದ ಹಲವು ಬಾರಿ ಹಣ ವರ್ಗಾವಣೆಯಾಗಿರುವ ಕುರಿತು ಪೊಲೀಸರು ಮಾಹಿತಿ ಕಲೆಹಾಕಿದ್ದು ತನಿಖೆ ಮುಂದುವರೆಸಿದ್ದಾರೆ.

ಏನಿದು ಪ್ರಕರಣ?

ಕಡಬಡಿ ಅವರ ಮಾಲೀಕತ್ವದ ಜಮೀನಿಗೆ ಒಳ್ಳೆ ಬೆಲೆ ಸಿಗುತ್ತದೆ.ಇದನ್ನು ಮಾರಿದರೆ ದೊಡ್ಡಮೊತ್ತದ ಹಣ ಬರುತ್ತದೆ ಎಂದು ನಂಬಿಸಲಾಗಿತ್ತು. ಇದಕ್ಕಾಗಿ ಕಂದಾಯ ಇಲಾಖೆಯಿಂದ ಜಮೀನಿನ ಅಳತೆ ಮಾಡಿಸಿ, ಪೋಡಿ ಹಾಗೂ ದುರಸ್ತಿ ಮಾಡಿಸಬೇಕು ಎಂದು ಹೇಳಿ ಗೋಪಾಲ್ ಹಂತಹಂತವಾಗಿ 21.65 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಕಡಬಡಿ ದೂರಿನಲ್ಲಿ ತಿಳಿಸಿದ್ದಾರೆ. ಇಲ್ಲಿನ ತಹಸೀಲ್ದಾರ್ ನನಗೆ ಒಳ್ಳೆಯ ಪರಿಚಯವಿದೆ ಈ ಜಮೀನಿನಲ್ಲಿ 10 ಗುಂಟೆ ಜಮೀನು ಹೆಚ್ಚುವರಿಯಾಗಿದೆ, ಇದರಲ್ಲಿ 2 ಗುಂಟೆ ಖರಾಬು ತೋರಿಸಿ ಉಳಿದ 8 ಗುಂಟೆಯನ್ನು ನಿಮ್ಮ ಹೆಸರಿಗೆ ಸೇರಿಸುತ್ತೇನೆ ಇದಕ್ಕೆ 8 ಲಕ್ಷ ರೂಪಾಯಿ ಸರ್ಕಾರಕ್ಕೆ ಹಣ ಕಟ್ಟಬೇಕು ಎಂದು ಮತ್ತೊಮ್ಮೆ ಹಣ ಪಡೆದಿದ್ದರು. ಅಷ್ಟರಲ್ಲಿ 21.65 ಲಕ್ಷ ರೂಪಾಯಿ ಕೈಬಿಟ್ಟಿತ್ತು. ಇಷ್ಟೆಲ್ಲ ಹಣ ನೀಡಿದ ಮೇಲೂ ಯಾವುದೇ ಪೋಡಿ ದಾಖಲೆ ಮಾಡಿರಲಿಲ್ಲ. ಇದರಿಂದ ಬೇಸತ್ತು ಹಣ ವಾಪಸ್ ಕೊಡುವಂತೆ ದುಂಬಾಲು ಬಿದ್ದೆ. ಇನ್ನು 20 ದಿನದಲ್ಲಿ ಸರಿ ಮಾಡಿಕೊಡುತ್ತೇನೆ ಎಂದು ಹೇಳಿದರವರು ಇದುವರೆಗೆ ದಾಖಲೆಯೂ ಇಲ್ಲ ಹಣವೂ ಪಾವಸ್ ಬಂದಿಲ್ಲ. ಈ ಬಗ್ಗೆ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕು ಎಂದು ನಿವೃತ್ತ ಸೈನಿಕ ಕಡಬಡಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net