

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಹೋಬಳಿಯ ಲಕ್ಕಸಂದ್ರ ಕ್ರಾಸ್‌ನ ಜಮೀನೊಂದ ಮರವೇರಿದ 3 ತಿಂಗಳ ಚಿರತೆ ಮರಿಯ ರಕ್ಷಣೆಗೆ ಅರಣ್ಯ ಇಲಾಖೆ ಹರಸಾಹಸ ನಡೆಸಿದರಾದರೂ ಸಲವಾಗಿಲ್ಲ.
ಸಂಜೆ ವೇಳೆ ಸ್ಥಳೀಯರ ಕಣ್ಣಿಗೆ ಬಿದ್ದ ಚಿರತೆಮರಿ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದಾವಿಸಿದ ಅರಣ್ಯಾಧಿಕಾರಿಗಳು ಬಲೆ ಹಾಕಿ ಹಿಡಿಯುವ ಪ್ರಯತ್ನ ನಡೆಸಿದರು. ರಾತ್ರಿ ಸುಮಾರು 10 ಗಂಟೆವರೆಗೆ ಚಿರತೆ ಮರಿ ಸೆರೆ ಕಾರ್ಯಾಚರಣೆ ನಡೆಸಿ ಕತ್ತಲಾವರಿಸಿದ್ದರಿಂದ ಮುಂಜಾನೆ ಮುಂದುವರೆಸುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.
ಬಲೆ ಇಲ್ವಂತೆ: ವಿಷಯ ತಿಳಿದ ಇಬ್ಬರು ಅರಣ್ಯ ಸಿಬ್ಬಂದಿ ಮರಿ ರಕ್ಷಣೆಗೆ ಬೇಕಾದ ಯಾವೊಂದು ಸಲಕರಣೆಗಳನ್ನು ತಂದಿಲ್ಲ ಎನ್ನಲಾಗಿದ್ದು, ಬಲೆಯಲ್ಲಿ ಮರಿ ರಕ್ಷಣೆ ಮಾಡುವುದಾಗಿ ಹೇಳುತ್ತಾರೆ, ಬೆಂಗಳೂರಿನಿಂದ ಬಲೆ ಬರಬೇಕು ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಇನ್ನು ಚಿಕ್ಕಮುದ್ದೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವು ತಿಂಗಳಿಂದ ಚಿರತೆಗಳ ಸಂಚಾರದ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ರಕ್ಷಣೆ ಕಷ್ಟ! ಅರಣ್ಯ ಇಲಾಖೆ ಸಿಬ್ಬಂದಿ ಸುಭಾಷ್ ಮಾತನಾಡಿ, ಬಲೆಯ ಮೂಲಕ ಚಿರತೆ ಮರಿ ರಕ್ಷಣೆಗೆ ಪ್ರಯತ್ನ ಮಾಡುತ್ತೇವೆ, ಕತ್ತಲು ಆವರಿಸಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸುಭಾಷ್ ಗ್ರಾಮಸ್ಥರ ಮನವೊಲಿಸುವ ಕಸರತ್ತು ನಡೆಸಿದರು.