ಗ್ರಾಮಾಂತರದಲ್ಲಿ ಚಿರತೆ ಹಾವಳಿ

Published on

ಈಶ್ವರಮಂಗಲ: ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಹಲವು ಕಡೆ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಪುತ್ತೂರು ನಗರ ವ್ಯಾಪ್ತಿಯ ಪಡೀಲು,ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಸೇಡಿಯಾಪು, ಸರ್ವೆ, ಸವಣೂರು ಸಮೀಪದ ಪಾಲ್ತಾಡಿ ಗ್ರಾಮದ ಬಂಬಿಲ ಮೊದಲಾದ ಕಡೆ ಚಿರತೆ ಕಾಣಿಸಿಕೊಂಡಿದೆ. ಜನತೆಗೆ ಕಾಣ ಸಿಕ್ಕಿದೆ ಎನ್ನಲಾಗುತ್ತಿರುವ ಚಿರತೆ ಹೋಲುವ ಪ್ರಾಣಿ ಚಿರತೆಯೇ ಅಥವಾ ನಾಯಿ ಹುಲಿಯೇ ಎಂಬ ಸಂಶಯವೂ ಇದೆ.

ಸರ್ವೆ ಗ್ರಾಮದ ಕೂಡುರಸ್ತೆ ಸಮೀಪದ ಎಲಿಯದಲ್ಲಿ ಇತ್ತೀಚೆಗೆ ಬಾಳಯ ನಿವಾಸಿ ಗುರುಪ್ರಸಾದ್ ಎಂಬುವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಚಿರತೆ ಎದುರಾಗಿತ್ತು. ಕಲ್ಪಣೆ ಶಾಲಾ ಸಮೀಪಪರಾಡ್ ನಿವಾಸಿ ಅಬ್ದುಲ್ ರಹಿಮಾನ್ ಅವರ ಮನೆಯ ಅಂಗಳದಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿದ್ದವು. ಈ ಸ್ಥಳಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಪುತ್ತೂರು ನಗರದ ಹೊರವಲಯದ ಪಡೀಲಿನ ಬಡಾವಣೆಯಲ್ಲಿ ಚಿರತೆ ಹಾಗೂ ಅದರ ಎರಡು ಮರಿಗಳು ಓಡಾಡುತ್ತಿದ್ದುದ್ದನ್ನು ಅಲ್ಲಿನ ಮಹಿಳೆಯೊಬ್ಬರು ಕಂಡಿದ್ದರೆನ್ನಲಾಗಿದೆ.

ಬೋನು ಅಳವಡಿಕೆ: ಜನತೆಯಲ್ಲಿ ಭೀತಿ ಸೃಷ್ಟಿಸಿರುವ ಚಿರತೆ ಸೆರೆಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಲವೆಡೆ ಬೋನು ಅಳವಡಿಸಿದೆ ಎಂದು ಅರಣ್ಯ ರಕ್ಷಕ ಸತ್ಯನ್ ಡಿ.ಜಿ. ಮಾಹಿತಿ ನೀಡಿದ್ದಾರೆ.

ಕಾಡುಕೋಣ ಹಾವಳಿ: ಇನ್ನೊಂದೆಡೆ ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ಪ್ರದೇಶದಲ್ಲಿ ಕಾಡುಕೋಣಗಳ ಹಿಂಡು ಕೃಷಿ ಪ್ರದೇಶಕ್ಕೆ ನುಗ್ಗಿ ಬೆಳೆ ನಾಶಮಾಡುತ್ತಿದೆ. 10ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕಾಡುಕೋಣಗಳ ಹಿಂಡು ರಾತ್ರಿ ವೇಳೆ ಭತ್ತದ ಗದ್ದೆಗಳಿಗೆ ದಾಳಿಯಿಟ್ಟು ನಾವು ಬೆಳೆದ ಭತ್ತದ ಪೈರನ್ನು ನಾಶ ಮಾಡುತ್ತಿವೆ ಎಂದು ಅಲ್ಲಿನ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಬಪ್ಪಪುಂಡೇಲು ನಿವಾಸಿ ಹೊನ್ನಪ್ಪ ನಾಯ್ಕ ಅವರು 1 ಎಕರೆಯಲ್ಲಿ ಬೆಳೆದ ಭತ್ತದ ಪೈರು ತೆನೆ ಬಿಡುವ ಹಂತದಲ್ಲಿದ್ದು, ಈ ಗದ್ದೆಗೆ ಕಾಡುಕೋಣಗಳು ಲಗ್ಗೆಯಿಟ್ಟು ಮಕ್ಕಾಲು ಭಾಗಪೈರನ್ನು ತಿಂದು ನಾಶ ಮಾಡಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net